ಅಸ್ಸಾಂ ನೆರೆ: ಮತ್ತೆ ನಾಲ್ವರ ಸಾವು, ಸಾವಿನ ಸಂಖ್ಯೆ 121ಕ್ಕೆ ಏರಿಕೆ
25 ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತರು

Photo: PTI
ಗುವಾಹಟಿ, ಜೂ. 26: ಅಸ್ಸಾಂನಲ್ಲಿ ನೆರೆಗೆ ಕಳೆದ 24 ಗಂಟೆಗಳಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ. ಇದರೊಂದಿಗೆ ಮಳೆ ಸಂಬಂಧಿ ದುರಂತಗಳಲ್ಲಿ ಮೃತಪಟ್ಟವರ ಸಂಖ್ಯೆ ಶನಿವಾರ 121ಕ್ಕೆ ಏರಿಕೆಯಾಗಿದೆ.
ಬಾರ್ಪೇಟ, ಚಾಚರ್ ದರ್ರಾಂಗ್ ಹಾಗೂ ಗೋಲಾಘಾಟ್ನಲ್ಲಿ ತಲಾ ಒಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಆದಾಗ್ಯೂ, ಅಸ್ಸಾಂನಲ್ಲಿ ನೆರೆ ಪರಿಸ್ಥಿತಿ ಶನಿವಾರ ಸುಧಾರಿಸಿದೆ. ನೆರೆಯಿಂದ ರಾಜ್ಯಾದ್ಯಂತದ 27 ಜಿಲ್ಲೆಗಳ 2,894 ಗ್ರಾಮಗಳ 25.10 ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತರಾಗಿದ್ದಾರೆ.
ಸುಮಾರು 7.50 ಲಕ್ಷ ಜನರು ಸಂತ್ರಸ್ತರಾಗುವ ಮೂಲಕ ಬಾರ್ಪೇಟ ಜಿಲ್ಲೆ ತೀವ್ರ ತೊಂದರೆಗೀಡಾಗಿದೆ. ಇಲ್ಲಿ 5.11 ಲಕ್ಷ ಜನರಿಗೆ ನೆರೆಯಿಂದ ಇದುವರೆಗೆ ಇನ್ನೂ ಬಿಡುಗಡೆ ಸಿಕ್ಕಿಲ್ಲ.
ಇನ್ನೊಂದೆಡೆ 637 ಪರಿಹಾರ ಶಿಬಿರಗಳಲ್ಲಿ 2.33 ಲಕ್ಷಕ್ಕೂ ಅಧಿಕ ಜನರು ಆಶ್ರಯ ಪಡೆದುಕೊಂಡಿದ್ದಾರೆ. ನೆರೆ ನೀರಿನಿಂದ 80,346 ಹೆಕ್ಟೇರ್ ಕೃಷಿ ಭೂಮಿ ಹಾನಿಗೀಡಾಗಿದೆ.
6ನೇ ದಿನವಾದ ಇಂದು ಕೂಡ ಹಲವು ಪ್ರದೇಶಗಳು ಜಲಾವೃತವಾಗಿರುವುದರಿಂದ ದಕ್ಷಿಣ ಅಸ್ಸಾಂನ ಕಾಚರ್ ಜಿಲ್ಲೆಯ ಸಿಲ್ಚಾರ್ ಪಟ್ಟಣದಲ್ಲಿ ನೆರೆ ಪರಿಸ್ಥಿತಿ ತೀವ್ರಗೊಂಡಿದೆ. ನಗರದಿಂದ ಸುಮಾರು 4 ಕಿ.ಮೀ. ದೂರಲ್ಲಿರುವ ಬೇತುಕಂಡಿ ಅಣೆಕಟ್ಟು ಜೂನ್ 17ರಂದು ಒಡೆದ ಪರಿಣಾಮ ಉಂಟಾದ ನೆರೆಯಿಂದ 2 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ.