ಅಮೆರಿಕ: ಬಂದೂಕು ನಿಯಂತ್ರಣ ಕಾಯ್ದೆಗೆ ಬೈಡನ್ ಸಹಿ
ವಾಷಿಂಗ್ಟನ್, ಜೂ.26: ಬಂದೂಕು ಸುರಕ್ಷತೆಗೆ ಸಂಬಂಧಿಸಿದ, ಕಳೆದ ಹಲವು ದಶಕಗಳಲ್ಲೇ ಅತ್ಯಂತ ಮಹತ್ವದ ಮಸೂದೆಗೆ ಶನಿವಾರ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಸಹಿ ಹಾಕುವುದರೊಂದಿಗೆ ಅದೀಗ ಕಾಯ್ದೆಯ ರೂಪ ಪಡೆದಿದೆ.
ಇದು ನಿಜವಾಗಿಯೂ ಅಗತ್ಯವಿರುವ ಮಟ್ಟದಲ್ಲಿ ಇರದಿದ್ದರೂ ಖಂಡಿತ ಜೀವವನ್ನು ಉಳಿಸುವ ಮಟ್ಟದಲ್ಲಿದೆ. ಈ ಮಸೂದೆಯು ನನಗೆ ಬೇಕಾದ ಎಲ್ಲವನ್ನೂ ಒಳಗೊಂಡಿರದಿದ್ದರೂ, ಇದು ಜೀವಗಳನ್ನು ಉಳಿಸಲು ನಾನು ದೀರ್ಘಕಾಲದಿಂದ ಪ್ರತಿಪಾದಿಸಿದ ಅಂಶಗಳನ್ನು ಒಳಗೊಂಡಿದೆ ಎಂದು ಬೈಡನ್ ಈ ಸಂದರ್ಭ ಪ್ರತಿಕ್ರಿಯಿಸಿದರು ಎಂದು ವರದಿಯಾಗಿದೆ.
ಬಂದೂಕು ಮಾರುವ ಮುನ್ನ ಯುವ ಖರೀದಿಗಾರರ ಹಿನ್ನೆಲೆಯನ್ನು ಪರಿಶೀಲಿಸುವುದು, ಬೆದರಿಕೆ ಎಂದು ನ್ಯಾಯಾಲಯ ಪರಿಗಣಿಸುವ ವ್ಯಕ್ತಿಗಳಿಂದ ತಾತ್ಕಾಲಿಕವಾಗಿ ಬಂದೂಕುಗಳನ್ನು ಕಿತ್ತುಕೊಳ್ಳಲು ಅವಕಾಶ ನೀಡುವುದು, ಬಂದೂಕು ಖರೀದಿಸಲು ಅವಕಾಶ ಇಲ್ಲದವರ ಪರವಾಗಿ ಬಂದೂಕು ಖರೀದಿಸುವ ‘ಡಮ್ಮಿ ಖರೀದಿಗಾರರ’ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು, ಬಂದೂಕು ಕಳ್ಳಸಾಗಾಣಿಕೆ ನಿಬರ್ಂಧಕ್ಕೆ ಕ್ರಮ ಕೈಗೊಳ್ಳುವುದು ಬಂದೂಕು ನಿಯಂತ್ರಣ ಕಾಯ್ದೆಯಲ್ಲಿ ಸೇರಿದೆ. ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ನಡೆದ ಹಲವು ಗುಂಡಿನ ದಾಳಿ ಪ್ರಕರಣಗಳನ್ನು ಪರೋಕ್ಷವಾಗಿ ಉಲ್ಲೇಖಿಸಿದ ಬೈಡನ್, ‘ಏನಾದರೂ ಮಾಡಿ, ದೇವರ ಸಲುವಾಗಿ ಏನಾದರೂ ಮಾಡಿ’ ಎಂಬ ಸಂತ್ರಸ್ತರ ಸಂದೇಶಕ್ಕೆ ನಾವಿಂದು ಸ್ಪಂದಿಸಿದ್ದೇವೆ ಎಂದರು.
ಆಡಳಿತ ಮತ್ತು ವಿರೋಧ ಪಕ್ಷಗಳ ಸಮಾನ ಬಲವಿರುವ ಅಮೆರಿಕದ ಸಂಸತ್ತಿನಲ್ಲಿ, ಈ ಮಸೂದೆಗೆ ರಿಪಬ್ಲಿಕನ್ ಹಾಗೂ ಡೆಮೊಕ್ರಾಟ್ ಸದಸ್ಯರ ಅಪರೂಪದ ಪೂರ್ಣ ಬೆಂಬಲ ದಕ್ಕಿದೆ. ಇದೊಂದು ಐತಿಹಾಸಿಕ ಉಪಕ್ರಮವಾಗಿದೆ. ಇನ್ನೂ ಮಾಡಬೇಕಿರುವ ಕಾರ್ಯ ಬಹಳಷ್ಟಿದೆ ಎಂಬುದು ನನಗೆ ತಿಳಿದಿದೆ, ನಾನು ಹಿಂಜರಿಯುವುದಿಲ್ಲ ಎಂದು ಹೇಳಿದ ಬೈಡನ್, ಮಸೂದೆಗೆ ಸಹಿ ಹಾಕಿದ ಬಳಿಕ ‘ಇದು ದೈವೇಚ್ಛೆಯಾಗಿತ್ತು’ ಎಂದು ಉದ್ಘರಿಸಿದರು.