ನಾಯಿಯ ಮೇಲೆ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿಯ ಫೋಟೊ ಅಂಟಿಸಿದ ವ್ಯಕ್ತಿ: ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಭೋಪಾಲ್: ಮಧ್ಯಪ್ರದೇಶದ ಖಾಂಡ್ವಾದಲ್ಲಿ ಪಂಚಾಯತ್ ಚುನಾವಣಾ ಅಭ್ಯರ್ಥಿಯೊಬ್ಬರು ನಾಯಿಯ ಮೇಲೆ ಪ್ರತಿಸ್ಪರ್ಧಿಗಳ ಪೋಸ್ಟರ್ಗಳನ್ನು ಹಾಕಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರತಿಸ್ಪರ್ಧಿ ಅಭ್ಯರ್ಥಿ ದಿವ್ಯಾದಿತ್ಯ ಶಾ ಪರವಾಗಿ ಚುನಾವಣಾ ಏಜೆಂಟ್ ಸಂತೋಷ್ ಸೋನಿ ನೀಡಿದ ದೂರಿನ ಮೇರೆಗೆ 14 ನೇ ವಾರ್ಡ್ನ ಅಭ್ಯರ್ಥಿ ಮುಖೇಶ್ ಅವರ ತಂದೆ ಕಾಶಿರಾಮ್ ದರ್ಬಾರ್ ವಿರುದ್ಧ ಹರ್ಸೂದ್ ಪೊಲೀಸ್ ಠಾಣೆಯಲ್ಲಿ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಡಿಒಪಿ ರವೀಂದ್ರ ವಾಸ್ಕಲೆ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿಯ 14ನೇ ವಾರ್ಡ್ನ ಅಭ್ಯರ್ಥಿ ಮುಖೇಶ್ ದರ್ಬಾರ್, ಬಿಜೆಪಿ ಪರ ಅಭ್ಯರ್ಥಿ ದಿವ್ಯಾದಿತ್ಯ ಶಾ ಅವರ ಭಾವಚಿತ್ರವಿರುವ ಪೋಸ್ಟರ್ ಅನ್ನು ನಾಯಿಯ ಬೆನ್ನಿಗೆ ಅಂಟಿಸಿ, ನಾಯಿಯನ್ನು ಗ್ರಾಮದಲ್ಲಿ ತಿರುಗಾಡಿಸಿದ್ದಾರೆ. ಈ ಕೃತ್ಯದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಶಾ ಅವರ ತಂದೆ ಸಚಿವರಾಗಿದ್ದರೆ, ಅವರ ತಾಯಿ ಖಾಂಡ್ವಾದ ಮಾಜಿ ಮೇಯರ್ ಆಗಿದ್ದರು. ಅವರ ಭಾವಚಿತ್ರವನ್ನೂ ನಾಯಿಯ ಮೇಲೆ ಅಂಟಿಸಲಾಗಿದೆ ಎಂದು ಅಮರ್ ಉಜಾಲ ವರದಿ ಮಾಡಿದೆ. ಪ್ರತಿಸ್ಪರ್ಧಿಯ ಈ ಕ್ರಮವು ಅವರ ತಮ್ಮ ಮತ್ತು ಕುಟುಂಬ ಸದಸ್ಯರನ್ನು ಮುಜುಗರಕ್ಕೀಡು ಮಾಡುವ ಗುರಿಯನ್ನು ಹೊಂದಿದೆ ಎಂದು ದೂರುದಾರರು ಹೇಳಿದ್ದಾರೆ. ಸದ್ಯ, ಪೊಲೀಸರು ಕಾಶಿರಾಮ್ ದರ್ಬಾರ್ ವಿರುದ್ಧ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1960ರ ಸೆಕ್ಷನ್ 11(6) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.