ಸ್ಮಶಾನಕ್ಕೆ ರಸ್ತೆ ನಿರ್ಮಿಸುವಂತೆ ಒತ್ತಾಯ; ಬೆಳಗಾವಿ ಡಿಸಿ ಕಚೇರಿ ಎದುರು ಶವವಿಟ್ಟು ಹಿಂದೂ-ಮುಸ್ಲಿಮರ ಧರಣಿ

ಬೆಳಗಾವಿ, ಜೂ.27: ಸ್ಮಶಾನಗಳಿಗೆ ತೆರಳಲು ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಶವ ಇಟ್ಟು ಹಿಂದೂ ಹಾಗೂ ಮುಸ್ಲಿಂ ಧರ್ಮೀಯರು ಧರಣಿ ನಡೆಸಿದರು.
ಸೋಮವಾರ ಇಲ್ಲಿನ ಸವದತ್ತಿ ತಾಲೂಕಿನ ಏಣಗಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿ ಏಣಗಿಯ ಅಬ್ದುಲ್ ಖಾದರ್ ಮಿಶ್ರಿಕೋಟಿ(65) ಎಂಬುವರ ಮೃತದೇಹವಿಟ್ಟು ಧರಣಿ ನಡೆಸಿ, ಜಿಲ್ಲಾಡಳಿತ ವಿರುದ್ಧ ಆಕ್ರೋಶ ಹೊರಹಾಕಿದರು.
ಅಬ್ದುಲ್ ಖಾದರ್ ಮಿಶ್ರಿಕೋಟಿ ಅವರ ಶವ ಸಂಸ್ಕಾರಕ್ಕೆ ಸ್ಮಶಾನಕ್ಕೆ ಹೋಗಲು ಮಾರ್ಗಮಧ್ಯೆ ಇರುವ ಹೊಲಗಳ ರೈತರು ಪದೇ ಪದೇ ತಕರಾರು ತೆಗೆದಿದ್ದರು. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ, ಪಂಚಾಯಿತಿ, ತಾಲೂಕು ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಧರಣಿ ನಿರತರು ಬೇಸರ ವ್ಯಕ್ತಪಡಿಸಿದರು.
ಹಾಗಾಗಿ, ಸೋಮವಾರ ಶವವನ್ನು ವಾಹನದಲ್ಲಿ ಹಾಕಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಬಂದು ಕುಳಿತಿದ್ದೇವೆ. ಬರೀ ಒಂದು ಸಮುದಾಯಕ್ಕೆ ಮಾತ್ರವಲ್ಲದೆ, ಎರಡೂ ಸಮುದಾಯದ ಸ್ಮಶಾನಗಳಿಗೆ ತೆರಳಲು ಹಾದಿ ಇಲ್ಲ ಎಂದು ಮೃತರ ಸಂಬಂಧಿ ಇಬ್ರಾಹಿಂ ಹೇಳಿದರು.
ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಈ ದಾರಿಗೆ ಮೂರು ಹೆಕ್ಟೇರ್ ಜಮೀನು ಅಗತ್ಯವಿದೆ. ರೈತರ ಮನವೊಲಿಸಿ ಭೂಸ್ವಾಧೀನ ಮಾಡಿಕೊಂಡು ರಸ್ತೆ ನಿರ್ಮಾಣ ಮಾಡಲಾಗುವುದು. ಅಲ್ಲಿಯವರೆಗೆ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಶವ ಸಾಗಿಸಲು ಅನುಕೂಲ ಮಾಡಲಾಗುವುದು ಎಂದು ಭರವಸೆ ನೀಡಿದರು.







