ಉಡುಪಿ ನಗರಸಭೆಯಲ್ಲಿ ಪ್ರತಿಧ್ವನಿಸಿದ ರಾ.ಹೆದ್ದಾರಿಯ ಸಮಸ್ಯೆಗಳು
ಪರ್ಕಳದಲ್ಲಿ ಕುಸಿದ ಹೆದ್ದಾರಿ, ಪರಿಶೀಲಿಸಿ ಕ್ರಮಕ್ಕೆ ಅಧ್ಯಕ್ಷರ ಸೂಚನೆ

ಉಡುಪಿ: ರಾಷ್ಟ್ರೀಯ ಹೆದ್ದಾರಿ ೧೬೯‘ಎ’ ಇದರ ಕೆಳಪರ್ಕಳದಲ್ಲಿ ಕುಸಿದಿರುವ ರಸ್ತೆಯನ್ನು ವಾರಾಹಿ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿ ಕೂಡಲೇ ಕ್ರಮ ತೆಗೆದುಕೊಳ್ಳ ಬೇಕು. ಇಲ್ಲದಿದ್ದರೆ ಹೆಬ್ರಿ-ಮಣಿಪಾಲ ರಸ್ತೆ ಸಂಪರ್ಕವೇ ಕಡಿತ ಆಗುವ ಸಾಧ್ಯತೆ ಇದೆ ಎಂದು ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ನಡೆದ ಉಡುಪಿ ನಗರಸಭೆಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿ ದ್ದರು. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿ ಯರ್‌ಗಳು ಹಾಜರಿದ್ದ ಈ ಸಭೆಯಲ್ಲಿ ಸದಸ್ಯರುಗಳಿಂದ ನಗರಸಭಾ ವ್ಯಾಪ್ತಿಯ ಸಮಸ್ಯೆಗಳ ಮಹಾಪೂರವೇ ಕೇಳಿಬಂತು. ಕೆಳಪರ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕುಸಿದಿ ರುವ ಬಗ್ಗೆ ಅಧ್ಯಕ್ಷರು ಇಂಜಿನಿಯರ್ ಮಂಜುನಾಥ್ ಅವರನ್ನು ಪ್ರಶ್ನಿಸಿ ದರು. ಅದಕ್ಕೆ ಅವರು, ವಾರಾಹಿ ಕುಡಿಯುವ ನೀರಿನ ಪೈಪ್‌ಲೈನ್‌ನಿಂದಾಗಿ ರಸ್ತೆ ಕುಸಿದಿರುವುದಾಗಿ ದೂರಿದರು.
ಇದಕ್ಕೆ ವಾರಾಹಿ ಯೋಜನೆಯ ಇಂಜಿನಿಯರ್ ಪ್ರತಿಕ್ರಿಯಿಸಿ, ನಮ್ಮ ಪೈಪ್ ಲೈನ್ ಮಾಡಿರುವ ಭಾಗದಲ್ಲಿ ರಸ್ತೆ ಕುಸಿದಿಲ್ಲ ಎಂದು ಸಮಜಾಯಿಸಿ ನೀಡಿದರು. ವಿಪಕ್ಷ ನಾಯಕ ರಮೇಶ್ ಕಾಂಚನ್ ಒತ್ತಾಯದಂತೆ ಎರಡು ಇಲಾಖೆಯ ಇಂಜಿನಿಯರ್‌ಗಳು ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧ್ಯಕ್ಷರು ಸೂಚಿಸಿದರು.
ಇಂದ್ರಾಳಿ ಸೇತುವೆ ಕಾಮಗಾರಿ
ರಾಷ್ಟ್ರೀಯ ಹೆದ್ದಾರಿ ೧೬೯ ಎ ಇದರ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ವಿಳಂಬದ ಕುರಿತ ಪ್ರಶ್ನೆಗೆ ಉತ್ತರಿಸಿದ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್ ಮಂಜುನಾಥ್, ಹಿಂದೆ ಇದ್ದ ಡಿಸೈನ್ ಬದಲಾಯಿಸಲಾಗಿದೆ. ಹೊಸ ಡಿಸೈನ್ ಮಾಡಿ ಮಂಜೂರಾತಿಗಾಗಿ ದೆಹಲಿಗೆ ಕಳುಹಿಸಲಾಗಿದೆ. ಈ ವಿಚಾರ ಸಂಸದರ ಗಮನಕ್ಕೂ ತರಲಾಗಿದೆ. ಸೇತುವೆ ಹೊರತು ಪಡಿಸಿದರೆ ಉಳಿದ ಎಲ್ಲ ಸಿವಿಲ್ ಕಾಮಗಾರಿ ಮುಗಿದಿದೆ ಎಂದರು.
ಉಡುಪಿ -ಮಣಿಪಾಲ ಹೆದ್ದಾರಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಹರಿದುಹೋಗುತ್ತಿಲ್ಲ. ಈ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಯಲ್ಲೇ ನೀರು ನಿಂತ ಪರಿಣಾಮ ವಾಹನಗಳು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದಿವೆ. ಇಂದ್ರಾಳಿ ಹಾಗೂ ಎಂಜಿಎಂ ಕಾಲೇಜಿನ ಎದುರು ನೀರು ರಸ್ತೆಯಲ್ಲಿ ಹರಿಯು ತ್ತಿವೆ ಎಂದು ಗಿರೀಶ್ ಅಂಚನ್ ದೂರಿದರು.
ಆದಿಉಡುಪಿ- ಮಲ್ಪೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬದ ಕುರಿತು ಸುಂದರ್ ಕಲ್ಮಾಡಿ ಅವರ ಪ್ರಶ್ನೆಗೆ ಉತ್ತರಿಸಿದ ಇಂಜಿನಿಯರ್, ಈ ಬಗ್ಗೆ ತ್ರಿಡಿ ಡ್ರಾಫ್ಟ್ ಸಿದ್ಧಪಡಿ ಕುಂದಾಪುರ ಉಪವಿಭಾಗಾಧಿಕಾರಿಗೆ ಸಲ್ಲಿಕೆ ಮಾಡಲಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಈ ಪ್ರಕ್ರಿಯೆ ವಿಳಂಬವಾಗಿದೆ ಎಂದರು.
ವಿದ್ಯುತ್ ಕಂಬಗಳಲ್ಲಿ ಕೇಬಲ್
ವಿದ್ಯುತ್ ಕಂಬಗಳಿಗೆ ಅನಧಿಕೃತ ಕೇಬಲ್ ಕಟ್ಟುವ ಕುರಿತ ರಮೇಶ್ ಕಾಂಚನ್ ಪ್ರಶ್ನೆಗೆ ಉತ್ತರಿಸಿದ ಮೆಸ್ಕಾಂ ಅಧಿಕಾರಿ ಗಣರಾಜ್ ಭಟ್, ನಮ್ಮ ಕಂಬಗಳಲ್ಲಿ ಅಧಿಕೃತ ಯಾವುದು, ಅನಧಿಕೃತ ಯಾವುದು ಎಂಬುದು ಗೊತ್ತಾ ಗುತ್ತಿಲ್ಲ. ಅಧಿಕೃತ ಕೇಬಲ್‌ನವರು ಮೆಸ್ಕಾಂಗೆ ಬಾಡಿಗೆ ಪಾವತಿಸುತ್ತಾರೆ. ಆದರೆ ಕಂಬಗಳಲ್ಲಿ ಕೇಬಲ್ ಬಂಡಲ್‌ಗಳನ್ನೇ ಉಳಿಸಿಕೊಳ್ಳುತ್ತಿರುವ ಟೆಲಿಕಾಂ ಕಂಪೆನಿ ಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದರು.
ಸರ್ವಿಸ್ ನಿಲ್ದಾಣದ ನಗರಸಭೆ ಕಟ್ಟಡದಲ್ಲಿರುವ ಯಾತ್ರಿ ನಿವಾಸವನ್ನು ಅನೈತಿಕ ಚಟುವಟಿಕೆ ಕಾರಣಕ್ಕಾಗಿ ಬಂದ್ ಮಾಡಲಾಗಿದ್ದು, ಇದೀಗ ಅದರ ವಿರುದ್ಧ ಮಾಲಕ ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದಾರೆ. ಆ ತಡೆ ಯಾಜ್ಞೆಯನ್ನು ತೆರವುಗೊಳಿಸುವ ನಿಟ್ಟಿನಲ್ಲಿ ನಗರಸಭೆಯಿಂದ ವಕೀಲರನ್ನು ನೇಮಕ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಮಣಿಪಾಲದಲ್ಲಿ ಪ್ರಾಯೋಗಿಕವಾಗಿ ಮಾಡಲಾಗಿರುವ ಟ್ರಾಫಿಕ್ ಸಿಗ್ನಲ್ ಲೈಟ್‌ನ್ನು ಉಳಿದ ೧೨ ಕಡೆಗಳಲ್ಲಿ ಸ್ಥಾಪಿಸಲು ಕ್ರಮ ತೆಗೆದುಕೊಳ್ಳಲಾಗಿದ್ದು, ಈ ಸಂಬಂಧ ಟ್ರಾಫಿಕ್ ಪೊಲೀಸರು ಸ್ಥಳ ಗುರುತಿಸಿ ಶಿಫಾರಸ್ಸು ಮಾಡಿದ್ದಾರೆ ಎಂದು ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ ಹಾಜರಿದ್ದರು.
‘ಸರ್ವಿಸ್ ರಸ್ತೆ ಬೇಕಾದರೆ ಮನವಿ ಸಲ್ಲಿಸಿ’
೨೦೧೦ರ ಸಮೀಕ್ಷೆಯಂತೆ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಸರ್ವಿಸ್ ರಸ್ತೆಗಳನ್ನು ನಿರ್ಮಿಸಲಾಗಿದ್ದು, ನಗರಸಭಾ ವ್ಯಾಪ್ತಿಯಲ್ಲಿ ಇನ್ನು ಸರ್ವಿಸ್ ರಸ್ತೆ ಅಗತ್ಯ ಇದ್ದರೆ ಇಲಾಖೆಗೆ ಮನವಿ ಸಲ್ಲಿಸಬೇಕು. ಈ ಬಗ್ಗೆ ಪರಿಶೀಲಿಸಿ ಇಲಾಖೆ ರಸ್ತೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುತ್ತದೆ. ಈಗಾಗಲೇ ಉದ್ಯಾವರ ಬಲಾಯಿಪಾದೆ ಬಳಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಎಂದು ಇಲಾಖೆಯ ಇಂಜಿನಿಯರ್ ಅಮರ್ ಸಭೆಗೆ ಮಾಹಿತಿ ನೀಡಿದರು.
ಅದೇ ರೀತಿ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿನ ಚರಂಡಿ ಸಮಸ್ಯೆ, ನಿಟ್ಟೂರು ಮತ್ತು ಕೊಡಂಕೂರಿನಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಬಗ್ಗೆ, ಸರ್ವಿಸ್ ರಸ್ತೆ, ಸಂತೆಕಟ್ಟೆ ಅಂಡರ್‌ಪಾಸ್ ನಿರ್ಮಾಣ, ದಾರಿದೀಪಗಳ ಕುರಿತ ಸದಸ್ಯರು ಸಂಬಂಧಪಟ್ಟವರಿಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.








