ದಮನಿತ ಮಹಿಳೆಯರಿಗೆ ಸರಕಾರದ ಎಲ್ಲಾ ಸೌಲಭ್ಯಗಳನ್ನು ಒದಗಿಸಿ: ನ್ಯಾ.ಶಾಂತವೀರ ಶಿವಪ್ಪ
ಉಡುಪಿ : ದಮನಿತ ಮಹಿಳೆಯರಿಗೆ ಸರಕಾರದ ವಿವಿಧ ಇಲಾಖೆ ಗಳ ಮೂಲಕ ದೊರೆಯುವ ಎಲ್ಲಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಯೋಜನೆಗಳ ಪ್ರಯೋಜನಗಳನ್ನು ಅವರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಬಂಧ ಪಟ್ಟ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಶಾಂತವೀರ ಶಿವಪ್ಪ ಹೇಳಿದ್ದಾರೆ.
ಸೋಮವಾರ ಉಡುಪಿ ಜಿಲ್ಲಾ ಏಡ್ಸ್ ತಡೆಗಟ್ಟುವ ಘಟಕದಲ್ಲಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಸಹಯೋಗ ದಲ್ಲಿ ನಡೆದ, ದಮನಿತ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಾಗಾರ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾನೂನು ತಿಳಿದಿಲ್ಲ. ಆದ್ದರಿಂದ ತಪ್ಪು ಮಾಡಿದ್ದೇನೆ, ಕ್ಷಮಿಸಿ ಎಂಬುವುದನ್ನು ನ್ಯಾಯಾಲಯ ಒಪ್ಪುವುದಿಲ್ಲ. ಆದ್ದರಿಂದ ಎಲ್ಲಾ ದಮನಿತ ಮಹಿಳೆಯರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಅಗತ್ಯವಿರುವ ಕಾನೂನಿನ ಅರಿವು ಮಾತ್ರವಲ್ಲದೆ, ತಮ್ಮ ಹಕ್ಕುಗಳ ಬಗ್ಗೆಯೂ ಸಹ ಮಾಹಿತಿ ಪಡೆಯಬೇಕು. ಸರಕಾರವು ವಿವಿಧ ಇಲಾಖೆಗಳ ಮೂಲಕ ತಮ್ಮ ಶ್ರೇಯೋಭಿವೃದ್ಧಿಗೆ ರೂಪಿಸುವ ಯೋಜನೆಗಳ ಮಾಹಿತಿ ಮತ್ತು ಅವುಗಳ ಸೌಲಭ್ಯ ಪಡೆದು ಸಮಾಜದ ಮುಖ್ಯವಾಹಿನಿಯೊಂದಿಗೆ ಬೆರೆಯಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಕಿವಿಮಾತು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಮಾತನಾಡಿ, ಜಿಲ್ಲೆಯಲ್ಲಿ ೩೭ ಮಂದಿ ದಮನಿತ ಮಹಿಳೆಯರನ್ನು ಈಗಾಗಲೇ ಗುರುತಿಸಲಾಗಿದೆ. ಈ ಸಂಖ್ಯೆ ಇನ್ನೂ ಅಧಿಕವಿರುವ ಸಾಧ್ಯತೆಗಳಿದ್ದು, ಈ ಸಮುದಾಯ ಮತ್ತು ಸರಕಾರಿ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಿ ಅವರಿಗೆ ಸೌಲಭ್ಯಗಳನ್ನು ಒದಗಿಸಬೇಕಿದೆ. ಈಗಾಗಲೇ ಜಿಲ್ಲೆಯಲ್ಲಿ ಗುರುತಿಸಿಕೊಂಡಿರುವ ಈ ಮಹಿಳೆಯರಿಗೆ ಚುನಾವಣಾ ಗುರುತಿನ ಚೀಟಿ ಮತ್ತು ಪಡಿತರ ಚೀಟಿಗಳನ್ನು ಒದಗಿಸಲಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವೀಣಾ ವಿವೇಕಾನಂದ ಮಾತನಾಡಿ, ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ದಮನಿತ ಮಹಿಳೆಯರಿಗೆ ಚೇತನಾ ಯೋಜನೆ ಮೂಲಕ ೩೦,೦೦೦ ರೂ. ಗಳ ಅರ್ಥಿಕ ನೆರವು ನೀಡಲಾಗುತ್ತಿದೆ. ಇವರುಗಳ ನಿರ್ದಿಷ್ಟ ಸಂಖ್ಯೆಯ ಬಗ್ಗೆ ಮಾಹಿತಿ ಸಂಗ್ರಹಿಸಿ, ಸರಕಾರದ ಸೌಲಭ್ಯಗಳ ಮಾಹಿತಿ ಒದಗಿಸಲು ಹಾಗೂ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಲು ಸೂಕ್ತ ಸ್ವಯಂಸೇವಾ ಸಂಘಟನೆಯ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಮಾತನಾಡಿ, ದಮನಿತ ಮಹಿಳೆಯರ ಸಮಸ್ಯೆಗಳ ಬಗ್ಗೆ ಜಿಲ್ಲಾ ಮಟ್ಟದ ಸಲಹಾ ಸಮಿತಿಯಲ್ಲಿ ಚರ್ಚಿಸಿ ಅಗತ್ಯವಿರುವ ನೆರವು ನೀಡಲಾಗುತ್ತಿದೆ. ಸಮುದಾಯದ ಮಹಿಳೆಯರು ಸಂಘಟಿತರಾಗಿ ಸರಕಾರಿ ಸೌಲಭ್ಯಗಳ ಪ್ರಯೋಜನ ಪಡೆದು, ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯಬೇಕು. ಇವರ ಇನ್ನಿತರ ಸಮಸ್ಯೆಗಳ ಬಗ್ಗೆ ಸರಕಾರದ ಗಮನಕ್ಕೆ ತರಲು ಉತ್ತಮ ಸಂಘಟನೆಯ ಅಗತ್ಯವಿದ್ದು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಸಹ ಅಗತ್ಯ ಕಾನೂನಿನ ಅರಿವು ಮತ್ತು ನೆರವು ಪಡೆಯಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಉಡುಪಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಜಯಂತ್ ಎಂ, ದಮನಿತ ಮಹಿಳೆಯರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಕಾನೂನಿನಡಿಯಲ್ಲಿ ಪಡೆಯ ಬಹುದಾದ ನೆರವುಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮಹಾಬಲೇಶ್ವರ್ ಸ್ವಾಗತಿಸಿದರು, ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ಚಂದ್ರಿಕಾ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ವಂದಿಸಿದರು.