ಶ್ರೀಲಂಕಾ: ತೈಲ ದಾಸ್ತಾನು ಕನಿಷ್ಟ ಮಟ್ಟಕ್ಕೆ; ಶಾಲೆಗಳಿಗೆ ರಜೆ, ವರ್ಕ್ ಫ್ರಂ ಹೋಮ್ ಜಾರಿ

ಕೊಲಂಬೊ, ಜೂ.27: ಅಸಾಮಾನ್ಯ ಆರ್ಥಿಕ ಬಿಕ್ಕಟ್ಟಿನಿಂದ ನಲುಗಿರುವ ಶ್ರೀಲಂಕಾಕ್ಕೆ ಈಗ ಮತ್ತೊಂದು ಆಘಾತ ಎದುರಾಗಿದೆ. ದೇಶದಲ್ಲಿನ ತೈಲ ದಾಸ್ತಾನು ಬಹುತೇಕ ಕಾಲಿಯಾಗಿದ್ದು ತೈಲ ಉಳಿಸುವ ನಿಟ್ಟಿನಲ್ಲಿ ಕಡೆಯ ಪ್ರಯತ್ನ ನಡೆಸಿರುವ ಸರಕಾರ, ಉದ್ಯೋಗಿಗಳು ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಮತ್ತು ಶಾಲೆಗಳನ್ನು ಮುಚ್ಚುವಂತೆ ಸೂಚಿಸಿದೆ.
ಪೆಟ್ರೋಲ್ ಬಂಕ್ಗಳಲ್ಲಿ ಸಾರ್ವಜನಿಕರಿಗೆ ತೈಲ ಖರೀದಿಸಲು ಟೋಕನ್ ವ್ಯವಸ್ಥೆ ಜಾರಿಗೊಳಿಸಿದ್ದು ತಮ್ಮ ಸರದಿಗಾಗಿ ಜನತೆ ದಿನಗಟ್ಟಲೆ ಕಾಯುವ ಪರಿಸ್ಥಿತಿಯಿದೆ. ದೈನಂದಿನ ದುಡಿಮೆಯಿಂದ ಸಂಸಾರ ನಿರ್ವಹಿಸುವ ತಮ್ಮಂತವರು ಪೆಟ್ರೋಲ್ ಪಡೆಯಲು ಸರತಿ ಸಾಲಿನಲ್ಲಿ ದಿನಗಟ್ಟಲೆ ನಿಂತಿರುವುದರಿಂದ ಕುಟುಂಬದವರು ಉಪವಾಸ ಬೀಳುವ ಪರಿಸ್ಥಿತಿಯಿದೆ ಎಂದು ರಿಕ್ಷಾ ಡ್ರೈವರ್ಗಳು ಆತಂಕ ವ್ಯಕ್ತಪಡಿಸಿದ್ದಾರೆ. ಟೋಕನ್ ಪಡೆದು 4 ದಿನದಿಂದ ಸರತಿ ಸಾಲಿನಲ್ಲಿ ನಿಂತಿದ್ದರೂ ತಮ್ಮ ಸರದಿ ಇನ್ನೂ ಬಂದಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ದೇಶದಲ್ಲಿ ಸುಮಾರು 9000 ಟನ್ಗಳಷ್ಟು ಡೀಸೆಲ್ ಮತ್ತು 6000 ಟನ್ಗಳಷ್ಟು ಪೆಟ್ರೋಲ್ ದಾಸ್ತಾನು ಇರುವುದಾಗಿ ಇಂಧನ ಸಚಿವ ಕಾಂಚನ ವಿಜೆಸೇಕರ ಹೇಳಿದ್ದು, ಈ ತೈಲವನ್ನು ಸಾರ್ವಜನಿಕ ಸಾರಿಗೆ, ವಿದ್ಯುತ್ ಉತ್ಪಾದನಾ ಘಟಕ, ವೈದ್ಯಕೀಯ ಸೇವೆಗಳಿಗೆ ಒದಗಿಸಲು ಆದ್ಯತೆ ನೀಡಲಾಗುವುದು ಎಂದಿದ್ದಾರೆ. ಸರಕಾರಿ ಉದ್ಯೋಗಿಗಳು ಮುಂದಿನ ಆದೇಶದವರೆಗೆ ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಮತ್ತು ಕೊಲಂಬೊ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಲೆಗಳನ್ನು ಒಂದು ವಾರ ಮುಚ್ಚುವಂತೆ ಸರಕಾರ ಸೂಚಿಸಿದೆ.