ಪ್ರೊ.ಭವಾನಿ ಶಂಕರ್ ನೆನಪಿನಲ್ಲಿ... ಭಾವ ದ್ಯುತಿ ಕಾರ್ಯಕ್ರಮ
ಶಿರ್ವ: ಪದವಿ ಹಂತದಲ್ಲಿ ಪಠ್ಯಕ್ರಮಕ್ಕೆ ಮಾತ್ರ ಸೀಮಿತಗೊಳ್ಳದೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸ್ಪಂದನೆಯ ಗುಣವನ್ನು ಪ್ರೇರೇಪಿಸುವಲ್ಲಿ ಪ್ರಾಧ್ಯಾ ಪಕರ ಪಾತ್ರ ಮಹತ್ವದ್ದಾಗಿದೆ ಎಂದು ನಿವೃತ್ತ ಕನ್ನಡ ಉಪನ್ಯಾಸಕ, ಸಾಹಿತಿ ಕೆ.ಎಸ್.ಶ್ರೀಧರಮೂರ್ತಿ ಹೇಳಿದ್ದಾರೆ.
ಶಿರ್ವ ಸಂತಮೇರಿ ಕಾಲೇಜು, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಕಾಪು ತಾಲೂಕು ಘಟಕ, ಸಂತಮೇರಿ ಕಾಲೇಜು ಹಳೆವಿದ್ಯಾರ್ಥಿ ಸಂಘ ಮತ್ತು ಕಾಲೇಜಿನ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಫಾ.ಹೆನ್ರಿ ಕೆಸ್ತಲಿನೊ ಸ್ಮಾರಕ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರೊ.ಎನ್.ಭವಾನಿ ಶಂಕರ್ ನೆನಪಿನಲ್ಲಿ... ಭಾವ ದ್ಯುತಿ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿ ಅವರು ಮಾತನಾಡುತಿದ್ದರು.
ಭವಾನಿ ಶಂಕರ್ ಅಧ್ಯಯನಶೀಲರು, ಬರಹಗಾರರು, ಸಾಕ್ಷಚಿತ್ರಗಳ ತಯಾರಕರೂ ಆಗಿದ್ದು, ಸ್ವವೌಲ್ಯಮಾಪನ ಮಾಡುವ ಶಕ್ತಿ ಅವರಲ್ಲಿತ್ತು. ಅವರ ಬಹುಮುಖ ವ್ಯಕ್ತಿತ್ವದ ಮಾದರಿ ಸೇವೆ ಅತ್ಯುತ್ತಮ ನಿದರ್ಶನ. ವೈಯುಕ್ತಿಕ ವಾಗಿ ಕನ್ನಡ ಸಾರಸ್ವತ ಲೋಕಕ್ಕೆ ಹತ್ತುಹಲವು ಸಂಶೋಧನಾತ್ಮಕ ಅಮೂಲ್ಯ ಕೃತಿಗಳನ್ನು ನೀಡಿ ಅಮರರಾಗಿದ್ದಾರೆ. ಕನ್ನಡದಲ್ಲಿ ಮೊಟ್ಟಮೊದಲ ವೀಡಿಯೋ ಕವನ ಹೊರ ತಂದ ಸಾಧಕ ಇವರು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ಪ್ರೊ.ಭವಾನಿ ಶಂಕರ್ ವಿದ್ಯಾರ್ಥಿಗಳಲ್ಲಿ ಜ್ಞಾನ ಕಟ್ಟುವ ಕೆಲಸ ಮಾಡಿ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಕವಾದ ಹಲವು ಗ್ರಂಥಗಳ ಮೂಲಕ ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಶಿರ್ವ ಆರೋಗ್ಯಮಾತಾ ದೇವಾಲಯದ ಪ್ರಧಾನ ಧರ್ಮ ಗುರುಗಳು, ಸಂತಮೇರಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ಫಾ.ಡಾ.ಲೆಸ್ಲಿ ಡಿಸೋಜ ವಹಿಸಿದ್ದರು. ವಿ.ಶಾರದಾ ಭವಾನಿ ಶಂಕರ್, ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ವಿಶ್ವನಾಥ, ಜಿಲ್ಲಾ ಕನ್ನಡ ಭವನ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ಉಪಸ್ಥಿತರಿದ್ದರು. ಕಸಾಪ ಕಾಪು ತಾಲೂಕು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಹೆರಾಲ್ಡ್ ಐವನ್ ಮೋನಿಸ್ ಸ್ವಾಗತಿಸಿದರು. ಆಕಾಶವಾಣಿ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಭಾವಾಂಜಲಿ -ಕನ್ನಡ ಗೀತೆಗಳನ್ನು ಹಾಡಿದರು. ಕಾಲೇಜಿನ ಕನ್ನಡ ವಿಬಾಗದ ಮುಖ್ಯಸ್ಥೆ ಪ್ರೊ. ಯಶೋದಾ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಕಾಪು ಘಟಕದ ಕಾರ್ಯ ದರ್ಶಿ ಅಶ್ವಿನ್ ಲಾರೆನ್ಸ್ ವಂದಿಸಿದರು. ಕಾಲೇಜಿನ ಹಳೆವಿದ್ಯಾರ್ಥಿ ಡಾ. ಎಡ್ವರ್ಡ್ ಮಥಾಯಸ್ ಪ್ರಾಯೋಜಕತ್ವ ವಹಿಸಿದ್ದರು.