ಶೀಘ್ರವೇ ಮುಂಬೈಗೆ ತೆರಳುತ್ತೇವೆ: ಬಂಡಾಯ ಶಾಸಕ ಏಕನಾಥ್ ಶಿಂಧೆ ಘೋಷಣೆ

Photo: PTI
ಗುವಾಹಟಿ: ಶೀಘ್ರವೇ ಮುಂಬೈಗೆ ಹೋಗಿ ಬಾಳಾಸಾಹೇಬ್ ಠಾಕ್ರೆ ಅವರ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವುದಾಗಿ ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಇಂದು ಘೋಷಿಸಿದರು.
ತಾವು ಹಾಗೂ ಇತರ ಬಂಡುಕೋರರು ಒಂದು ವಾರದಿಂದ ತಂಗಿರುವ ಗುವಾಹಟಿಯ ಹೋಟೆಲ್ನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಶಿಂಧೆ ಈ ಘೋಷಣೆ ಮಾಡಿದರು.
"ಗುವಾಹಟಿಯಲ್ಲಿ ನನ್ನೊಂದಿಗೆ 50 ಜನರಿದ್ದಾರೆ. ಅವರು ತಮ್ಮ ಸ್ವಂತ ಇಚ್ಛೆಯಿಂದ ಹಾಗೂ ಹಿಂದುತ್ವಕ್ಕಾಗಿ ಬಂದಿದ್ದಾರೆ. ನಾವೆಲ್ಲರೂ ಶೀಘ್ರದಲ್ಲೇ ಮುಂಬೈಗೆ ಹೋಗುತ್ತೇವೆ" ಎಂದು ಶಿಂಧೆ ಸುದ್ದಿಗಾರರಿಗೆ ತಿಳಿಸಿದರು.
ಶಿಂಧೆ ಅವರು ಅಧಿಕಾರದ ಹಕ್ಕು ಸಾಧಿಸಲು ಮುಂಬೈ ಅಥವಾ ದಿಲ್ಲಿಗೆ ತೆರಳಬಹುದು . ಅವರು ಕಳೆದ ವಾರ ಗುಜರಾತ್ನಲ್ಲಿ ಬಿಜೆಪಿಯ ಉನ್ನತ ನಾಯಕರನ್ನು ಭೇಟಿಯಾಗಿದ್ದರು.
ನಿನ್ನೆ ಬಂಡುಕೋರರನ್ನು ಅನರ್ಹಗೊಳಿಸುವ ನೋಟಿಸ್ಗೆ ಪ್ರತಿಕ್ರಿಯಿಸಲು ಸುಪ್ರೀಂಕೋರ್ಟ್ ಜುಲೈ 12 ರವರೆಗೆ ಕಾಲಾವಕಾಶ ನೀಡಿತ್ತು.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಯ ಸಾಧ್ಯತೆಯನ್ನು ಚರ್ಚಿಸಲು ವಕೀಲರೊಂದಿಗೆ ಶಿಂಧೆ ಸಮಾಲೋಚಿಸಿದ್ದಾರೆ ಎಂದು ವರದಿಯಾಗಿದೆ.