ಉಡುಪಿ: ತುಳುಕೂಟದಿಂದ ಡಾ.ಭಾಸ್ಕರಾನಂದ ಕುಮಾರ್‌ಗೆ ಅಭಿನಂದನೆ

ಉಡುಪಿ, ಜೂ.28: ಉಡುಪಿ ತುಳುಕೂಟದ ಸ್ಥಾಪಕಾಧ್ಯಕ್ಷರಾಗಿದ್ದು, ಕೈ ಮೂಳೆಯ ಶಸ್ತ್ರಚಿಕಿತ್ಸೆಯಲ್ಲಿ ಹೆಸರುವಾಸಿಯಾದ ಮೂಳೆತಜ್ಞ ಡಾ. ಭಾಸ್ಕರಾನಂದ ಕುಮಾರ್ ಇವರಿಗೆ ಅಂತಾರಾಷ್ಟ್ರೀಯ ಮಟ್ಟದ ‘ಪಯೊನೀರ್ ಇನ್ ಹ್ಯಾಂಡ್ ಸರ್ಜರಿ’ ಪುರಸ್ಕಾರ ಬಂದ ಹಿನ್ನೆಲೆಯಲ್ಲಿ ಉಡುಪಿ ತುಳುಕೂಟದ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಗರದ ಹೊಟೇಲ್ ಡಯಾನಾದಲ್ಲಿ ಜರಗಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಭಾಸ್ಕರಾನಂದ ಕುಮಾರ್, ಪೂರ್ವ ಜನ್ಮದ ಪುಣ್ಯದ ಫಲವಾಗಿ ಈ ಪ್ರಶಸ್ತಿ ಬಂದಿದೆ. ತುಳುಕೂಟದ ಸ್ಥಾಪನೆ ನಾನು ಮಾಡಿದ್ದರೂ, ಅದು ಇಷ್ಟು ದೊಡ್ಡ ಹೆಮ್ಮರವಾಗಿ ಬೆಳೆಯಲು ಹಲವಾರು ಜನರ ತ್ಯಾಗವಿದೆ ಎಂದರು.
ಈ ಸಂದರ್ಭದಲ್ಲಿ ಡಾ.ನಳಿನಿ ಭಾಸ್ಕರಾನಂದ ಕುಮಾರ್, ವಿಶ್ವನಾಥ್ ಶೆಣೈ, ಮುರಳೀಧರ ಉಪಾಧ್ಯ ಹಿರಿಯಡ್ಕ ಉಪಸ್ಥಿತರಿದ್ದರು. ಡಾ. ಗಣನಾಥ ಎಕ್ಕಾರು ಅಭಿನಂದನಾ ಭಾಷಣ ಮಾಡಿದರು.
ತುಳುಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರತ್ನಾಕರ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗಂಗಾಧರ ಕಿದಿಯೂರು ಸ್ವಾಗತಿಸಿ ತಾರಾ ಆಚಾರ್ಯ ಅಭಿನಂದನಾ ಪತ್ರ ವಾಚಿಸಿದರು. ಚೈತನ್ಯ ಎಂ.ಜಿ ವಂದಿಸಿದರು.