ನ್ಯಾಯಕ್ಕಾಗಿ ಹೋರಾಡುತ್ತಿರುವ ತೀಸ್ತಾ ವಿರುದ್ಧ ನಿರಂತರ ದಬ್ಬಾಳಿಕೆ: ಪ್ರೊ.ಫಣಿರಾಜ್
ಉಡುಪಿ, ಜೂ.28: 2002ರ ಗುಜರಾತ್ ಗಲಭೆಯ ಸಂತ್ರಸ್ತರಿಗೆ ಕಾನೂನು ಸಹಾಯ ಒದಗಿಸಲು ತೀಸ್ತಾ ಸೆಟಲ್ವಾಡ್ ಸರಕಾರೇತರ ಸಂಸ್ಥೆಯ ನೇತೃತ್ವದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದು, ಇದರ ವಿರುದ್ಧ ನರೇಂದ್ರ ಮೋದಿ ನೇತೃತ್ವದ ರಾಜ್ಯ ಸರಕಾರ, ಗುಜರಾತಿನ ಪೊಲೀಸರು ಹಾಗೂ ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಆಡಳಿತ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿದೆಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಆರೋಪಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಶ್ರೀಕುಮಾರ್ ಅವರ ಅನ್ಯಾಯದ ಬಂಧನ ವಿರೋಧಿಸಿ ಉಡುಪಿ ಸಹಬಾಳ್ವೆ, ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಮಂಗಳವಾರ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆ ಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.ನರೇಂದ್ರ ಮೋದಿಗೆ ಕ್ಲೀನ್‌ಚೀಟ್ ನೀಡಿದ ತೀರ್ಪು ಬಂದ ಬಳಿಕ ಅಮಿತ್ ಶಾ ಸಂದರ್ಶನವೊಂದರಲ್ಲಿ ತೀಸ್ತಾ ಕ್ರಿಮಿನಲ್ ಪಿತೂರಿ ನಡೆಸುತ್ತಿದ್ದಾರೆ ಎಂಬ ಆರೋಪ ಹೊರಿಸಿದ ಮರುದಿನವೇ ಎಫ್‌ಐಆರ್ ದಾಖಲಿಸಿ ಅವರನ್ನು ಬಂಧಿಸಲಾಗಿದೆ. ಅಹವಾಲು ಸಲ್ಲಿಸಿದವರನ್ನೇ ಅಪರಾಧಿಗಳನ್ನಾಗಿ ಪರಿಗಣಿಸಿ ರುವ ಸುಪ್ರೀಂ ಕೋರ್ಟಿನ ತೀರ್ಪಿನ ಬಗ್ಗೆ ಹಲವು ಮಂದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟಿನಲ್ಲಿ ಈ ತೀರ್ಪು ದುರಾದೃಷ್ಠಕರ. ಈ ಬಂಧನ ಅನ್ಯಾಯಯುತವಾಗಿದೆ. ಇದರ ವಿರುದ್ಧ ಹೋರಾಟ ಅಗತ್ಯವಾಗಿದೆ ಎಂದರು.
ದಸಂಸ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ಈ ದೇಶವನ್ನು ಆಳಿದ ಎಲ್ಲ ಸರಕಾರಗಳು ಸಮಪಾಲು ತತ್ವದಡಿ ಕೆಲಸ ಮಾಡಿದೆ. ಆದರೆ ಈಗಿರುವ ಬಿಜೆಪಿ ಸರಕಾರ ಗೂಂಡಾ ಪ್ರವೃತ್ತಿಯೊಂದಿಗೆ ಸಮಾಜದ್ರೋಹಿಯಾಗಿ ಕೆಲಸ ಮಾಡುತ್ತಿದೆ. ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ನೂರಾರು ಮಂದಿ ಹೋರಾಟಗಾರರನ್ನು ಜೈಲಿಗೆ ಹಾಕಲಾಗಿದೆ. ಇಂತಹ ಲಜ್ಜೆಗೆಟ್ಟ ಸರಕಾರವನ್ನು ಕಿತ್ತೊಗೆಯಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳಿಂದ ಜನರ ಹಕ್ಕುಗಳ ಮೇಲೆ ದಾಳಿ ಮುಂದುವರೆಯುತ್ತಿದೆ. ಇಡಿ ದುರ್ಬಳಕೆ ಮಾಡಿ ವಿರೋಧ ಪಕ್ಷಗಳನ್ನು ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಈ ಮೂಲಕ ಬಿಜೆಪಿ ಸರಕಾರ ಪ್ರಜಾಪ್ರಭುತ್ವ ವಿರೋಧಿ ಯಾಗಿ ವರ್ತಿಸುತ್ತಿದೆ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ತೀವ್ರ ಹೋರಾಟ ನಡೆಸಬೇಕಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ, ವಿವಿಧ ಸಂಘಟನೆಗಳ ಮುಖಂಡರಾದ ಇದ್ರೀಸ್ ಹೂಡೆ, ಶಶಿಧರ್ ಗೊಲ್ಲ, ರಮೇಶ್ ಕಾಂಚನ್, ಉದ್ಯಾವರ ನಾಗೇಶ್ ಕುಮಾರ್, ಸಂವರ್ತ್ ಸಾಹಿಲ್, ಅನ್ವರ್ ಅಲಿ ಕಾಪು, ಅಬ್ದುಲ್ ಅಝೀಝ್ ಉದ್ಯಾವರ, ಸಂತೋಷ್ ಕುಮಾರ್ ಶೆಟ್ಟಿ, ಯತೀಶ್ ಕರ್ಕೆರ, ಹುಸೇನ್ ಕೋಡಿಬೆಂಗ್ರೆ, ವರೋನಿಕಾ ಕರ್ನೆಲಿಯೋ ಮೊದಲಾದವರು ಉಪಸ್ಥಿತರಿದ್ದರು.