ಉತ್ತರಪ್ರದೇಶ: ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ, ಕತ್ತು ಹಿಸುಕಿ ಕೊಲೆ
ಬಾಲಕಿಯ ಅಕ್ಕ ಸಹಿತ 7 ಮಂದಿ ಆರೋಪಿಗಳ ಬಂಧನ

ಲಖಿಂಪುರ ಖೇರಿ (ಉತ್ತರಪ್ರದೇಶ): ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ 13 ವರ್ಷದ ಬಾಲಕಿಯ ಮೇಲೆ ನಾಲ್ವರು ಅತ್ಯಾಚಾರವೆಸಗಿ ಆಕೆಯ ಹಿರಿಯ ಸಹೋದರಿಯ ಸಮ್ಮುಖದಲ್ಲಿಯೇ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಕಬ್ಬಿನ ಗದ್ದೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ನಾಲ್ವರು, ಬಾಲಕಿಯ ಅಕ್ಕ ಹಾಗೂ ದುಷ್ಕೃತ್ಯ ಸಂದರ್ಭದಲ್ಲಿ ಕಾವಲು ನಿಂತಿದ್ದ ಇಬ್ಬರು ವ್ಯಕ್ತಿಗಳು ಸಹಿತ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಲಖಿಂಪುರ ಖೇರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸುಮನ್ ಸುದ್ದಿಗಾರರಿಗೆ ತಿಳಿಸಿದರು.
ಆರೋಪಿಗಳು 18 ರಿಂದ 19 ವರ್ಷದೊಳಗಿನವರಾಗಿದ್ದಾರೆ.
ನಾಲ್ವರು ಪುರುಷರೊಂದಿಗೆ ಅಕ್ಕನ ಅಕ್ರಮ ಸಂಬಂಧವನ್ನು ತಿಳಿದ ಬಾಲಕಿ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಹೋದರಿಯರು ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಅಕ್ಕ ಮಲವಿಸರ್ಜನೆಗೆ ಹೋಗುವ ನೆಪದಲ್ಲಿ, ತನ್ನೊಂದಿಗೆ ತನ್ನ ತಂಗಿಯನ್ನು ಹತ್ತಿರದ ಕಬ್ಬಿನ ಗದ್ದೆಗೆ ಕರೆದೊಯ್ದಳು. ಅಲ್ಲಿ ನಾಲ್ವರು ರಂಜಿತ್ ಚೌಹಾಣ್, ಅಮರ್ ಸಿಂಗ್, ಅಂಕಿತ್ ಹಾಗೂ ಸಂದೀಪ್ ಚೌಹಾಣ್ ಎಂದು ಗುರುತಿಸಲಾಗಿರುವ ಆರೋಪಿಗಳು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ.
ನಂತರ ಅಪ್ರಾಪ್ತ ಬಾಲಕಿಯನ್ನು ಆಕೆಯ ಸ್ಕಾರ್ಫ್ ನಿಂದ ಕತ್ತು ಹಿಸುಕಿ ಹತ್ಯೆ ಮಾಡಲಾಗಿತ್ತು.
ದೀಪು ಚೌಹಾಣ್ ಹಾಗೂ ಅರ್ಜುನ್ ಎಂಬ ಇಬ್ಬರು ವ್ಯಕ್ತಿಗಳು ಅತ್ಯಾಚಾರಿಗಳಿಗೆ ರಕ್ಷಣೆ ನೀಡಿದ್ದರು. ಬಾಲಕಿಯ ಅಕ್ಕ ಕೂಡ ಅಲ್ಲಿದ್ದಳು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.







