ಉದಯಪುರ್: ಕನ್ಹಯ್ಯಾ ಲಾಲ್ ಹತ್ಯೆ ಖಂಡಿಸಿ ಮೆರವಣಿಗೆ; ಕಲ್ಲು ತೂರಾಟ; ಪರಿಸ್ಥಿತಿ ನಿಯಂತ್ರಣ

ಉದಯಪುರ್: ರಾಜಸ್ಥಾನದ ಉದಯಪುರ್ನಲ್ಲಿ ಕ್ಯಾಮರಾ ಕಣ್ಣೆದುರಿನಲ್ಲೇ ಟೈಲರ್ ಕನ್ಹಯ್ಯಾ ಲಾಲ್ ಬರ್ಬರ ಹತ್ಯೆಯನ್ನು ಖಂಡಿಸಿ ಇಂದು ನಗರದಲ್ಲಿ ನೂರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭ ಕೆಲವು ಕ್ಷಣಗಳ ಕಾಲ ಕಲ್ಲು ತೂರಾಟದ ಘಟನೆಯು ನಡೆದರೂ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ ಎಂದು ವರದಿಯಾಗಿದೆ.
ವಿವಿಧ ಹಿಂದುತ್ವ ಸಂಘಟನೆಗಳ ಸುಮಾರು 1,000 ಪ್ರತಿಭಟನಾಕಾರರು ಕೇಸರಿ ಧ್ವಜಗಳನ್ನು ಹಿಡಿದುಕೊಂಡು ನ್ಯಾಯಕ್ಕಾಗಿ ಆಗ್ರಹಿಸುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಕೊಲೆ ಕೃತ್ಯ ನಡೆದ ಸ್ಥಳದ ಸಮೀಪ ಮೆರವಣಿಗೆ ಸಾಗುತ್ತಿದ್ದಂತೆಯೇ ಸ್ವಲ್ಪ ಉದ್ವಿಗ್ನತೆ ತಲೆದೋರಿದರೂ ಪೊಲೀಸರು ತಕ್ಷಣ ಗುಂಪನ್ನು ಚದುರಿಸಿದ್ದಾರೆ.ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲಾಡಳಿತ ಶಾಂತಿಯುತ ಮೆರವಣಿಗೆ ನಡೆಸಲು ಅವಕಾಶ ನೀಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ನಗರದಲ್ಲಿ ಕಫ್ರ್ಯೂ ಹೇರಿರುವಾಗ ಹಾಗೂ ಜನರು ಗುಂಪುಗೂಡುವುದನ್ನು ನಿಷೇಧಿಸಿರುವಾಗ ಮೆರವಣಿಗೆಗೆ ಏಕೆ ಅನುಮತಿಸಲಾಯಿತು ಎಂಬ ಪ್ರಶ್ನೆಗಳೂ ಇವೆ. ಮಂಗಳವಾರ ಕನ್ಹಯ್ಯಾಲಾಲ್ ಹತ್ಯೆಗೀಡಾದ ನಂತರ ನಗರದ ಎಲ್ಲಾ ಅಂಗಡಿಮುಂಗಟ್ಟುಗಳು ಮುಚ್ಚಿದ್ದು ಅಂತರ್ಜಾಲ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ.