ಪದವಿನಂಗಡಿ: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದ ಗಾಯಾಳು ಮೃತ್ಯು
ಮಂಗಳೂರು : ನಗರ ಹೊರವಲಯದ ಪದವಿನಂಗಡಿ ಬಾಂದೊಟ್ಟು ದ್ವಾರದ ಬಳಿ ನೂತನವಾಗಿ ನಿರ್ಮಾಣ ಗೊಳ್ಳುತ್ತಿರುವ 5 ಅಂತಸ್ತಿನ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ರವಿರಾಜ್ (53) ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ.
ಜಾರ್ಜ್ ಎಂಬವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದ ಗುತ್ತಿಗೆದಾರ ಪ್ರಶಾಂತ್‌ರ ನೇತೃತ್ವದಲ್ಲಿ ರವಿರಾಜ್ ಮಂಗಳವಾರ ಮೇಸ್ತ್ರಿ ಕೆಲಸ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ನಾಲ್ಕನೆ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಮೂರನೆ ಮಹಡಿಗೆ ಬಿದ್ದ ರವಿರಾಜ್‌ರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುರಕ್ಷತಾ ದೃಷ್ಟಿಯಿಂದ ಹಲಗೆಯಂತಹ ಕಬ್ಬಿಣದ ಜಾಲಿ ಅಳವಡಿಸಬೇಕಿದ್ದು, ಆದರೆ ಕಂಟ್ರಾಕ್ಟರ್ ಮತ್ತು ಕಟ್ಟಡದ ಮಾಲಕರು ಜಾಲಿ ಅಳವಡಿಸದೆ ಹಾಗೂ ಸೇಪ್ಟಿ ಬೆಲ್ಟ್, ಸೇಪ್ಟಿ ಹೆಲ್ಮೆಟ್ ನೀಡದೆ ನಿರ್ಲಕ್ಷ್ಯ ವಹಿಸಿರುವುದೇ ಅವಘಡಕ್ಕೆ ಕಾರಣ ಎಂದು ಪ್ರಕರಣ ದಾಖಲಿಸಿರುವ ಕದ್ರಿ ಪೊಲೀಸರು ತಿಳಿಸಿದ್ದಾರೆ.