ಟ್ರಂಪ್ ಸೋತು ಹೋದರೂ ಟ್ರಂಪಿಸಂ ಹೋಗಿಲ್ಲ, ಅದೊಂದು ಕಾಯಿಲೆ: ಡಾ.ಅಮರ್ ಕುಮಾರ್

ಮಂಗಳೂರು : ಕಳೆದ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಸೋತು ಹೋದರೂ ಕೂಡ ಟ್ರಂಪಿಯಿಸಂ ಹೋಗಿಲ್ಲ. ಅದೊಂದು ಕಾಯಿಲೆಯಾಗಿದೆ ಎಂದು ಅಮೇರಿಕಾದ ವೈದ್ಯ ಹಾಗೂ ಪ್ರಗತಿಪರ ಚಿಂತಕ ಡಾ.ಅಮರ್ ಕುಮಾರ್ ಹೇಳಿದರು.
ನಗರದ ವಿಕಾಸ ಕಚೇರಿಯಲ್ಲಿ ಸಮಾನ ಮನಸ್ಕರು, ಮಂಗಳೂರು ಇದರ ಆಶ್ರಯದಲ್ಲಿ ನಡೆದ ‘ಟ್ರಂಪೋತ್ತರ ಕಾಲಘಟ್ಟದ ಬದಲಾದ ಅಮೇರಿಕಾ’ ಎಂಬ ವಿಷಯದ ಮೇಲೆ ಅವರು ಉಪನ್ಯಾಸ ನೀಡಿದರು.
ಇಡೀ ಜಗತ್ತನ್ನೇ ಆಳುವ ಶಕ್ತಿ ಹೊಂದಿದ್ದ ಅಮೇರಿಕಾದ ಶಕ್ತಿ ಕುಗ್ಗುತ್ತಿದೆ. ಇದಕ್ಕೆ ಮುಖ್ಯ ಕಾರಣ ದೂರಗಾಮಿ ಕಣ್ಣೋಟದಲ್ಲಿ ಬೆಳೆಯುತ್ತಿರುವ ಚೀನಾ ದೇಶದ ಆರ್ಥಿಕತೆ ಒಂದೆಡೆಯಾದರೆ ಲ್ಯಾಟಿನ್ ಅಮೇರಿಕಾದ ೧೫ ದೇಶಗಳ ಪೈಕಿ ೯ ದೇಶಗಳಲ್ಲಿ ಈಗಾಗಲೆ ಎಡಪಂಥೀಯ ಸರಕಾರಗಳು ಅಸ್ತಿತ್ವಕ್ಕೆ ಬಂದಿರುವುದಾಗಿದೆ. ಅಮೇರಿಕಾ ಆಂತರಿಕವಾಗಿಯೂ ಕುಸಿಯುತ್ತಿದೆ. ಅಲ್ಲಿ ಪರಸ್ಪರ ವಿಭಜನೆಯ ಕಂದಕಗಳು ತೀವ್ರವಾಗುತ್ತಿದೆ. ಕರಿಯರ ಮತ್ತು ಬಿಳಿಯರ ಮಧ್ಯೆ,ನಗರ ಮತ್ತು ಗ್ರಾಮಾಂತರ ಪ್ರದೇಶದ ಮಧ್ಯೆ,ಬಡವ ಮತ್ತು ಶ್ರೀಮಂತರ ಮಧ್ಯೆ ಅಂತರ ಜಾಸ್ತಿಯಾಗಿದೆ. ಪರಸ್ಪರ ಅವಿಶ್ವಾಸ, ಅಪನಂಬಿಕೆಗಳು ಬೆಳೆಯುತ್ತಿದೆ. ಡ್ರಗ್ಸ್ ಮತ್ತಿತ್ತರ ಮಾದಕ ದ್ರವ್ಯಗಳು ಸಾಮಾಜಿಕ ಸ್ವಾಸ್ಥ್ಯ ಮತ್ತು ಮಾನಸಿಕ ಆರೋಗ್ಯವನ್ನು ಏರುಪೇರು ಮಾಡಿದೆ ಎಂದರು’.
ಸಭೆಯ ಅಧ್ಯಕ್ಷತೆಯನ್ನು ಸಮುದಾಯ ಸಂಘಟನೆಯ ರಾಜ್ಯ ಉಪಾಧ್ಯಕ್ಷ ವಾಸುದೇವ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಆದಿವಾಸಿ ಹಕ್ಕುಗಳ ಸಮಿತಿಯ ರಾಜ್ಯ ನಾಯಕ ಡಾ.ಕೃಷ್ಣಪ್ಪಕೊಂಚಾಡಿ ಮಾತನಾಡಿದರು.
ಸಂವಾದದಲ್ಲಿ ಪ್ರಗತಿಪರ ಚಿಂತಕರಾದ ಪ್ರೊ, ನರೇಂದ್ರ ನಾಯಕ್, ಶ್ಯಾಮಸುಂದರ್ ರಾವ್, ಪ್ರಭಾಕರ ಕಾಪಿಕಾಡ್, ವಿದ್ದು ಉಚ್ಚಿಲ್, ಶಿವಾನಂದ ಕೋಡಿ, ರಮೇಶ್ ಉಳ್ಳಾಲ್, ಎಂ.ದೇವದಾಸ್, ಯಾದವ ಶೆಟ್ಟಿ, ಸುಕುಮಾರ್, ಸುನಿಲ್ ಕುಮಾರ್ ಬಜಾಲ್, ಇಮ್ತಿಯಾಝ್ ಬಿ.ಕೆ., ಮನೋಜ್ ವಾಮಂಜೂರು, ಯೋಗೀಶ್ ಜಪ್ಪಿನಮೊಗರು ಪಾಲ್ಗೊಂಡಿದ್ದರು.







