ಮೈಸೂರು | ಇಳಕಲ್ ಡ್ಯಾಂ ಬಳಿ ಮೃಗಾಲಯ ಸ್ಥಾಪನೆ: ಸಚಿವ ಉಮೇಶ್ ಕತ್ತಿ

ಮೃಗಾಲಯ ವೀಕ್ಷಿಸುತ್ತಿರುವ ಸಚಿವರು
ಮೈಸೂರು,ಜೂ.30: ಇಳಕಲ್ ಡ್ಯಾಂ ಬಳಿ ನೂತನ ಮೃಗಾಲಯ ತೆರೆಯಲು ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ ಅನುಮತಿಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, 100 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಮೃಗಾಲಯ ನಿರ್ಮಾಣ ಮಾಡಗುವುದು ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದರು.
ಶುಕ್ರವಾರ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿ ಮೃಗಾಲಯ ವೀಕ್ಷಿಸಿ, ಅಧಿಕಾರಿಗಳ ಸಭೆ ನಡೆಸಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಇಳಕಲ್ ಮೃಗಾಲಯ ಆರಂಭವಾದರೆ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಪ್ರಾಣಿ ತಜ್ಞರ ಅಭಿಪ್ರಾಯ ಪಡೆದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೃಗಾಲಯ ತೆರೆಯಲು ಚಿಂತನೆ ನಡೆಸಲಾಗಿದೆ. ಮೈಸೂರು ಮೃಗಾಲಯದಂತೆ ಎಲ್ಲಾ ಮೃಗಾಲಯಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶ. ಇಂದಿನ ಯುವ ಜನತೆಗೆ ಪ್ರಾಣಿ ಪಕ್ಷಿಗಳನ್ನು ಪರಿಚಯಿಸುವ ದೃಷ್ಟಿಯಿಂದ ಮೃಗಾಲಯ ತೆರೆಯಲಾಗುತ್ತಿದೆ. ಇದು ಅರಣ್ಯ ಇಲಾಖೆಯ ಮುಖ್ಯ ಕಾರ್ಯಕ್ರಮ ಎಂದರು.
ಇದಕ್ಕೂ ಮುನ್ನ ಅವರು ನಿರ್ಮಾಣ ಹಂತದಲ್ಲಿರುವ ಗೊರಿಲ್ಲಾ ಗ್ಯಾಲರಿ, ಮೃಗಾಲಯದ ಉಗ್ರಾಣ, ಪಾಕಶಾಲೆ, ಆಸ್ಪತ್ರೆಯನ್ನು ವೀಕ್ಷಣೆ ಮಾಡಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಸಭೆ ನಡೆಸಿದರು.
ಈ ವೇಳೆ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ಸದಸ್ಯರುಗಳಾದ ಗೋಕುಲ್ ಗೋವರ್ಧನ್, ಮೃಗಾಲಯದ ನಿರ್ದೇಶಕ ಅಜಿತ್ ಕುಲಕರ್ಣಿ ಸೇರಿದಂತೆ ಇನ್ನಿತರರು ಇದ್ದರು.





