ಸೋಮವಾರ ಬಹುಮತ ಸಾಬೀತುಪಡಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆಗೆ ಸೂಚನೆ

Photo:PTI
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನವನ್ನು ಶಿವಸೇನ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಂದ ಕಸಿದುಕೊಂಡ ಕೇವಲ ಮೂರು ದಿನಗಳಲ್ಲಿ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸಬೇಕಾಗಿದೆ.
ಶಿಂಧೆ ಸೇರಿದಂತೆ ಶಿವಸೇನೆಯ 15 ಬಂಡುಕೋರರನ್ನು ಅನರ್ಹಗೊಳಿಸುವಂತೆ ಕೋರಿ ಠಾಕ್ರೆ ತಂಡ ಸಲ್ಲಿಸಿರುವ ಅರ್ಜಿಗಳು ಮತ್ತು ಅನರ್ಹಗೊಳಿಸುವ ಯತ್ನವನ್ನು ಪ್ರಶ್ನಿಸಿ ಹೊಸ ಮುಖ್ಯಮಂತ್ರಿ ಶಿಂಧೆ ಪಾಳೆಯ ಸಲ್ಲಿಸಿರುವ ಮತ್ತೊಂದು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಒಳಪಡಿಸಲಿರುವ ಕಾರಣ ಹೈ-ವೋಲ್ಟೇಜ್ ದಿನವಾದ ಸೋಮವಾರದಂದು ಶಕ್ತಿ ಪರೀಕ್ಷೆ ನಡೆಯಲಿದೆ.
ಆದಾಗ್ಯೂ, ಉದ್ಧವ್ ಠಾಕ್ರೆ ಶಿವಸೇನೆಯ ಹಿಡಿತವನ್ನು ಕಳೆದುಕೊಳ್ಳುವ ಭೀತಿಯಿಂದ ಹೊರಬಂದಿಲ್ಲ. 55 ಶಾಸಕರ ಪೈಕಿ 39 ಮಂದಿಯನ್ನು ಹೊಂದಿರುವ ತಮ್ಮ ಬಣವು ಕಾನೂನುಬದ್ಧ ಶಿವಸೇನೆಯಾಗಿದೆ. ಅದರ ಆದೇಶಗಳು ಮತ್ತು ನೇಮಕಾತಿಗಳು ಠಾಕ್ರೆ ಅವರ ತಂಡಕ್ಕೆ ಬದ್ಧವಾಗಿರುತ್ತವೆ ಎಂದು ಶಿಂಧೆ ಹೇಳಿದ್ದಾರೆ.
ಬಲಾಬಲ ಪರೀಕ್ಷೆ ಕೇವಲ ಔಪಚಾರಿಕವಾಗಿದೆ ಹಾಗೂ ತಮ್ಮ ಸರಕಾರ ಬಹುಮತ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿಶ್ವಾಸವಿದೆ. ನಮಗೆ 175 ಶಾಸಕರ ಬೆಂಬಲವಿದೆ ಎಂದು ನೂತನ ಸಿಎಂ ಶಿಂಧೆ ಹೇಳಿದರು.







