ಕೂರಲು ಏಳಲು ಆಗುವುದಿಲ್ಲ ಎಂದು ಅಪಹಾಸ್ಯ ಮಾಡೋರಿಗೆ ಪ್ರತ್ಯುತ್ತರ ಕೊಡುತ್ತೇನೆ: ಎಚ್.ಡಿ.ದೇವೇಗೌಡ

ಬೆಂಗಳೂರು, ಜು.1: ನಮ್ಮ ಪಕ್ಷವನ್ನು ಯಾರು ತುಳಿಯಬೇಕೆಂದು ಪ್ರಯತ್ನ ಮಾಡಿದ್ದಾರೋ ಅವರ ವಿರುದ್ಧ ಶತಾಯ ಗತಾಯ ಹೋರಾಟ ಮಾಡುವುದಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಶಪಥ ಮಾಡಿದರು.
ಶುಕ್ರವಾರ ನಗರದಲ್ಲಿರುವ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಜನತಾಮಿತ್ರ ಜನ ಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಸುಮ್ಮನೆ ಕೂರುವುದಿಲ್ಲ. ಕೂರಲು ಏಳಲು ಆಗುವುದಿಲ್ಲ ಎಂದು ಹಾಸ್ಯ ಮಾಡಿದವರಿಗೆ ನಾನು ಉತ್ತರ ಕೊಡುತ್ತೇನೆ ಎಂದರು.
ಮೊದಲು ಜಲಧಾರೆ ಕಾರ್ಯಕ್ರಮ ಆಯಿತು. ಈಗ ಜನತಾ ಮಿತ್ರ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿಗೆ ಏನು ಮಾಡಿದ್ದೇವೆ ಅನ್ನೋದನ್ನು ತುಂಬಾ ಮಾತನಾಡಬಲ್ಲೆ. ಬೆಂಗಳೂರಿಗೆ ಏನೇನು ಮಾಡಿದ್ದೇನೆ ಅನ್ನೋದನ್ನು ಹೇಳುವ ಕಾಲ ಬರುತ್ತದೆ. ಈ ದೇವೇಗೌಡ ಹಳ್ಳಿ ರೈತನ ಮಗ. ಕೆಲವರು ಏನು ಮಾಡಲು ಆಗುತ್ತೆ ಅಂತಾ ಕುಹಕವಾಡಿದ್ದಾರೆ. ಅವರಿಗೆಲ್ಲಾ ಉತ್ತರ ಕೊಡಬೇಕು ಎಂದು ಅವರು ಹೇಳಿದರು.
ನಮ್ಮ ಪಕ್ಷಕ್ಕೆ ಶಕ್ತಿ ಇಲ್ಲ ಅಂತ ಅಪಹಾಸ್ಯ ಮಾಡುತ್ತಾರೆ. ನಮ್ಮ ಶಕ್ತಿ ಏನು ಅನ್ನೋದನ್ನು ಸಾಬೀತುಪಡಿಸುತ್ತೇನೆ. ಈ ಬಾರಿ ನಮಗೆ ದೈವಿ ಶಕ್ತಿ ಇದೆ. ಪಕ್ಷದ ಪ್ರತಿಯೊಬ್ಬರೂ ಹೋರಾಟದ ಕೆಚ್ಚಿನಿಂದ ಕೆಲಸ ಮಾಡುತ್ತಿದ್ದಾರೆ. ನಮ್ಮ ಹೋರಾಟದ ಮೇಲೆ ಶಕ್ತಿ ಇದೆ. ಇದನ್ನು ನಾನು ಮಾಡುತ್ತೇನೆ. ಹೋರಾಟಕ್ಕೆ ಸಿದ್ಧರಾಗಿ ನಿಲ್ಲಿ ಎಂದು ಕಾರ್ಯಕರ್ತರಿಗೆ ಅವರು ಕರೆ ನೀಡಿದರು.
ಚುನಾವಣೆ ಕಾರಣಕ್ಕೆ ಸಂಪುಟ ವಿಸ್ತರಣೆ ಮಾಡುತ್ತಿಲ್ಲ: ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ ಮಾತನಾಡಿ, ಬಿಬಿಎಂಪಿ ಚುನಾವಣೆ ಬರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ವಿಧಾನಸಭಾ ಚುನಾವಣೆ ಡಿಸೆಂಬರ್ ವೇಳೆಗೆ ಬರಲಿದೆ. ಅದಕ್ಕಾಗಿಯೇ ಇನ್ನೂ ಸಂಪುಟ ವಿಸ್ತರಣೆ ಮಾಡಲು ಆಗಿಲ್ಲ ಎಂದರು.
ಕಮಲಕ್ಕೆ ಸೂರ್ಯೋದಯ ಚಿಂತೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಿಂತೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪ್ರಧಾನಿ ನರೇಂದ್ರ ಮೋದಿ ಚಿಂತೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ರಾಜ್ಯದ ಜನರ ಚಿಂತೆ ಎಂದು ಅವರು ಹೇಳಿದರು.
ರಾಜಣ್ಣ ಕ್ಷಮೆ ಕೇಳಬೇಕು: ದೇವೇಗೌಡರು ಈ ರಾಜ್ಯದ ಪಿತಾಮಹ. ಕರ್ನಾಟಕದ ಆರೂವರೆ ಕೋಟಿ ಜನರ ತಂದೆ. ಆದರೆ, ದೇವೇಗೌಡರ ಹುಟ್ಟು, ಸಾವಿನ ಬಗ್ಗೆ ಮಾತನ್ನಾಡುತ್ತಾರೆ. ರಾಜಣ್ಣ ನಿಮಗೆ ಅಪ್ಪ ಇಲ್ಲವಾ? ದೇವೇಗೌಡರು ಅಜರಾಮರರು. ಅವರಿಗೆ ಸಾವಿಲ್ಲ. ಇವರು ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದವರು. ಸೂರ್ಯ, ಚಂದ್ರ ಇರೋವರೆಗೂ ಅವರ ಹೆಸರು ಶಾಶ್ವತವಾಗಿರುತ್ತದೆ. ಮಾಜಿ ಶಾಸಕ ರಾಜಣ್ಣ ಕೂಡಲೇ ದೇವೇಗೌಡರ ಮನೆಗೆ ಬಂದು ಕ್ಷಮೆಯಾಚಿಸಬೇಕು ಎಂದು ಇಬ್ರಾಹೀಂ ಆಗ್ರಹಿಸಿದರು.







