ಬೆಲೆ ಕುಸಿತದಿಂದ ಕಂಗಾಲು; ತೆಂಗು ಬೆಳೆಗಾರರ ನೆರವಿಗೆ ಮನವಿ
ತೆಂಗಿಗೂ ಬೆಂಬಲ ಬೆಲೆ ಘೋಷಿಸಲು ಆಗ್ರಹ
ಉಡುಪಿ, ಜು.೧: ತೆಂಗಿನಕಾಯಿ ಬೆಲೆ ಕುಸಿತದಿಂದ ಕಂಗೆಟ್ಟಿರುವ ತೆಂಗು ಬೆಳೆಗಾರರು ಹಾಗೂ ರೈತರಿಗೆ ಸರಕಾರ ಕೂಡಲೇ ನೆರವಿಗೆ ಬಂದು ಬೆಂಬಲ ಬೆಲೆ ನೀಡಿ ಖರೀದಿಸುವಂತೆ ಕರ್ನಾಟಕ ಪ್ರಾಂತ್ಯ ರೈತ ಸಂಘ ಕುಂದಾಪುರ ತಾಲೂಕು ಸಮಿತಿ ರಾಜ್ಯ ಸರಕಾರವನ್ನು ಆಗ್ರಹಿಸಿದೆ.
ಕರಾವಳಿ ಜಿಲ್ಲೆಗಳ ಸಣ್ಣ ಮತ್ತು ಮಧ್ಯಮ ರೈತರು ಬದುಕು ನಿಂತಿರುವುದು ತೆಂಗು ಬೆಳೆಯಿಂದ. ಈ ಬಾರಿ ೧೦ ವರ್ಷದಲ್ಲೇ ಅತ್ಯಧಿಕ ಪ್ರಮಾಣದ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೇರಳ ರಾಜ್ಯದಲ್ಲಿ ಅತೀ ಹೆಚ್ಚು ತೆಂಗು ಬೆಳೆದರೂ ಬೆಲೆಯಲ್ಲಿ ಸ್ಥಿರತೆ ಕಾಪಾಡಿಕೊಂಡು ಬರಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಬೆಲೆಯ ಮೇಲೆ ಸರಕಾರದ ನಿಯಂತ್ರಣವಿಲ್ಲ ಎಂದು ಸಂಘ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ತೆಂಗಿನಕಾಯಿ ಬೆಲೆ ತೀವ್ರವಾಗಿ ಕುಸಿಯುತಿದ್ದರೂ, ಇದೇ ಸಂದರ್ಭದಲ್ಲಿ ತೆಂಗಿನ ಎಣ್ಣೆ ಮತ್ತು ಇತರೆ ಉತ್ಪನ್ನ ಗಳ ಬೆಲೆ ಗಗನಕ್ಕೆ ಏರುತ್ತಿದೆ. ರೈತರಿಂದ ಒಂದು ತೆಂಗಿನ ಕಾಯಿಗೆ ೮ರಿಂದ ೯ ರೂ. ದರದಲ್ಲಿ ಖರೀದಿಯಾಗು ತ್ತಿದ್ದರೂ, ಸಿಪ್ಪೆ ತೆಗೆದ ತೆಂಗಿನಕಾಯಿಗೆ ಪ್ರತಿ ಕೆಜಿಗೆ ಕೇವಲ ೨೬ ರೂಪಾಯಿಯನ್ನು ಸಗಟು ವ್ಯಾಪಾರಿಗಳು ನೀಡಿ ರೈತರಿಂದ ಖರಿದಿ ಮಾಡುತ್ತಿದ್ದಾರೆ. ಅದೇ ಸಂದರ್ಭದಲ್ಲಿ ಸಗಟು ವ್ಯಾಪಾರಿಗಳಿಂದ ಅಂಗಡಿಯವರು ಖರೀದಿಸಿ ಸುಮಾರು ೪೦ ರೂ.ಗೆ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ.
ಹಿಂದೆಲ್ಲಾ ತೆಂಗಿನ ಕೊಬ್ಬರಿ ಕೆ.ಜಿ.ಗೆ ಸರಾಸರಿ ೧೩೦ ರೂ.ಇರುತಿತ್ತು. ಈಗ ಅದು ಕೂಡ ಕಡಿಮೆಯಾಗಿದೆ. ಸುಪೀರಿಯರ್ ಗುಣಮಟ್ಟದ ಕೊಬ್ಬರಿ ಕೆಜಿಗೆ ೮೦ ರೂ.ನಿಂದ ೮೫ ರೂ. ಹಾಗೂ ಸಾಮಾನ್ಯ ಕೊಬ್ಬರಿ ಕೆಜಿಗೆ ೭೦ ರೂ.ನಿಂದ ೮೦ ರೂ.ಗೆ ಇಳಿದಿದೆ. ಬೇಡಿದನ್ನು ನೀಡುವ ಕಲ್ಪವೃಕ್ಷ ಎಂಬುದು ಈಗ ರೈತರ ಪಾಲಿಗೆ ಸುಳ್ಳಾಗಿದೆ ಎಂದು ಪ್ರಕಟಣೆಯಲ್ಲಿ ಬೇಸರ ವ್ಯಕ್ತಪಡಿಸಲಾಗಿದೆ.
ರೈತರು ತೆಂಗು ಬೆಳೆಯಲ್ಲಿ ಕೀಟಗಳ ಬಾಧೆ, ವನ್ಯಜೀವಿಗಳಿಂದ ಕೃಷಿಗೆ ಹಾನಿ, ಬೆಲೆ ಕುಸಿತದಿಂದ ರೈತರು ತೆಂಗಿನ ಮರದ ಬುಡಕ್ಕೆ ಹಾಕುವ ಗೊಬ್ಬರ, ಕೂಲಿ, ತೆಂಗಿನಕಾಯಿ ಕಾಯಿ ಕೊಯ್ಲಿಗೆ ಮಾಡುವ ಖರ್ಚು ಇಂದು ರೈತರಿಗೆ ಸಿಗುತ್ತಿಲ್ಲ. ಅತ್ಯಂತ ನಷ್ಟಕ್ಕೆ ರೈತರು ಸಿಲುಕಿದ್ದಾರೆ. ಇದರಿಂದಾಗಿ ಕರಾವಳಿಯ ರೈತರು ಹೊಸದಾಗಿ ತೆಂಗು ಬೆಳೆಯುವ ಮನಸು ಮಾಡುತ್ತಿಲ್ಲ. ತೆಂಗು ಬೆಳೆ ಅವಸಾನದ ಅಂಚಿಗೆ ಬಂದು ನಿಂತಿದೆ. ಕರಾವಳಿಯಲ್ಲಿ ತೆಂಗಿನಿಂದ ರೈತರ ಆದಾಯ ಹೆಚ್ಚಾಗುವ ಬದಲು ಕಡಿಮೆ ಆಗುತ್ತಿದೆ ಎಂದು ಸಂಘ ದೂರಿದೆ.
ಈ ಎಲ್ಲಾ ಕಾರಣಕ್ಕೆ ಸರಕಾರ ಕೂಡಲೇ ತೆಂಗಿಗೆ ಬೆಂಬಲ ಬೆಲೆ ಘೋಷಿಸಿ, ತೆಂಗಿನಕಾಯಿ ಪ್ರತಿ ಕೆಜಿಗೆ ಕನಿಷ್ಠ ೫೦ ರೂ. ನೀಡಿ ಖರೀದಿಗೆ ವ್ಯವಸ್ಥೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘ ಕುಂದಾಪುರ ತಾಲೂಕು ಸಮಿತಿ ಆಗ್ರಹಿಸಿದೆ.
ಸರಕಾರ ಈ ಬಗ್ಗೆ ಕ್ರಮ ವಹಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆ ತೆಂಗು ಬೆಳೆಗಾರರ ಸಮಾವೇಶ ನಡೆಸಿ ಪ್ರತಿ ತಾಲೂಕು ಮತ್ತು ಜಿಲ್ಲಾ ಕಛೇರಿ ಎದುರು ನಿರಂತರ ಹೋರಾಟ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ. ಶಂಕರ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.