ಟೆಸ್ಟ್ ಕ್ರಿಕೆಟ್ ಓವರ್ವೊಂದರಲ್ಲಿ 35 ರನ್ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ ಬುಮ್ರಾ
ಐದನೇ ಟೆಸ್ಟ್: ಭಾರತ 416 ರನ್ಗೆ ಆಲೌಟ್

Photo:twitter
ಎಜ್ಬಾಸ್ಟನ್, ಜು.2: ಭಾರತದ ನಾಯಕ ಜಸ್ಪ್ರಿತ್ ಬುಮ್ರಾ ಇಂಗ್ಲೆಂಡ್ ವಿರುದ್ಧ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಓವರ್ವೊಂದರಲ್ಲಿ 35 ರನ್ ಗಳಿಸಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದರು.
ಹಿರಿಯ ಬೌಲರ್ ಬ್ರಾಡ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಓವರ್ವೊಂದರಲ್ಲಿ ಗರಿಷ್ಠ ರನ್ ಸೋರಿಕೆ ಮಾಡಿ ಅನಪೇಕ್ಷಿತ ದಾಖಲೆ ನಿರ್ಮಿಸಿದರು. ಬ್ರಾಡ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ ಬುಮ್ರಾ 2007ರಲ್ಲಿ ನಡೆದಿದ್ದ ಮೊದಲ ಆವೃತ್ತಿಯ ಟ್ವೆಂಟಿ-20 ವಿಶ್ವಕಪ್ನ್ನು ನೆನಪಿಸಿದರು. ಇದೀಗ ನಿವೃತ್ತಿಯಾಗಿರುವ ಭಾರತದ ಆಲ್ರೌಂಡರ್ ಯುವರಾಜ್ ಸಿಂಗ್ ಅವರು ಬ್ರಾಡ್ ಓವರ್ವೊಂದರಲ್ಲಿ ಸತತ ಆರು ಸಿಕ್ಸರ್ ಸಿಡಿಸಿ 36 ರನ್ ಗಳಿಸಿದ್ದರು.
ಎರಡನೇ ದಿನವಾದ ಶನಿವಾರ ಭಾರತದ ಇನಿಂಗ್ಸ್ನ 84ನೇ ಓವರ್ನಲ್ಲಿ ಬ್ರಾಡ್ ವಿರುದ್ಧ ಬುಮ್ರಾ ಮುಗಿಬಿದ್ದರು. ಮೈದಾನದ ಮೂಲೆಮೂಲೆಗೆ ಚೆಂಡನ್ನು ಅಟ್ಟಿದರು. ಓವರ್ನಲ್ಲಿ 29 ರನ್ ಬುಮ್ರಾ ಬ್ಯಾಟ್ ಮೂಲಕ ಬಂದರೆ, ಉಳಿದ ರನ್ಗಳು ವೈಡ್ (5)ಹಾಗೂ ನೋಬಾಲ್ (1)ಮೂಲಕ ಬಂದವು.
ಬುಮ್ರಾ ಅವರು ಸ್ಟುವರ್ಟ್ ಬ್ರಾಡ್ ಎಸೆದ ಓವರ್ರೊಂದರಲ್ಲಿ 2 ಸಿಕ್ಸರ್ ಹಾಗೂ 4 ಬೌಂಡರಿಗಳ ಸಹಿತ 35 ರನ್ ಗಳಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಓವರ್ವೊಂದರಲ್ಲಿ ಗರಿಷ್ಠ ರನ್ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದರು. ಜಸ್ಪ್ರೀತ್ ಬುಮ್ರಾ 16 ಎಸೆತಗಳಲ್ಲಿ ಔಟಾಗದೆ 31 ರನ್ ಗಳಿಸಿ ಭಾರತದ ಸ್ಕೋರನ್ನು 400ರ ಗಡಿ ದಾಟಿಸಿದರು.
84ನೇ ಓವರ್ನಲ್ಲಿ ಬುಮ್ರಾ ಬ್ಯಾಟಿಂಗ್ ಹೀಗಿತ್ತು: 4, 5 ವೈಡ್, 6 ನೋಬಾಲ್, 4,4,4, 6,1
ಭಾರತ 416 ರನ್ಗೆ ಆಲೌಟ್: ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜ ಅವರ ಶತಕ, ನಾಯಕ ಜಸ್ಪ್ರಿತ್ ಬುಮ್ರಾ ಅವರ ವಿಶ್ವ ದಾಖಲೆಯ ಬ್ಯಾಟಿಂಗ್ ಬಲದಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 416 ರನ್ ಗಳಿಸಿ ಆಲೌಟಾಗಿದೆ.
ಎರಡನೇ ದಿನವಾದ ಶನಿವಾರ 7 ವಿಕೆಟ್ ನಷ್ಟಕ್ಕೆ 338 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತ ನಿನ್ನೆಯ ಮೊತ್ತಕ್ಕೆ 78 ರನ್ ಸೇರಿಸುವಷ್ಟರಲ್ಲಿ ಉಳಿದ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು.
ಆಲ್ರೌಂಡರ್ ರವೀಂದ್ರ ಜಡೇಜ 194 ಎಸೆತಗಳಲ್ಲಿ 104 ರನ್ ಸಿಡಿಸಿದರು. ಜಡೇಜ ಸಹಿತ 60 ರನ್ಗೆ 5 ವಿಕೆಟ್ಗಳನ್ನು ಕಬಳಿಸಿದ ಜೇಮ್ಸ್ ಆ್ಯಂಡರ್ಸನ್ ಇಂಗ್ಲೆಂಡ್ನ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಬ್ರಾಡ್(1-89)ಶಮಿ ವಿಕೆಟ್ ಪಡೆಯಲು ಮಾತ್ರ ಸಫಲರಾದರು. ಬೆನ್ ಸ್ಟೋಕ್ಸ್(1-47) ಹಾಗೂ ಜೋ ರೂಟ್(1-23)ತಲಾ ಒಂದು ವಿಕೆಟ್ ಪಡೆದರು.
Kya yeh Yuvi hai ya Bumrah!?
— Sachin Tendulkar (@sachin_rt) July 2, 2022
2007 ki yaad dilaa di.. @YUVSTRONG12 @Jaspritbumrah93 #ENGvIND pic.twitter.com/vv9rvrrO6K