ಜು.12:ಎಸ್‌ಸಿ,ಎಸ್‌ಟಿಗಳಿಗೆ ಶಿಕ್ಷಣ,ಉದ್ಯೋಗದಲ್ಲಿ ಮೀಸಲಾತಿಹೆಚ್ಚಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ
ನ್ಯಾ.ನಾಗಮೋಹನದಾಸ್ ಆಯೋಗದ ವರದಿ ಜಾರಿಗೆ ಒತ್ತಾಯ
ಉಡುಪಿ: ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಆಯೋಗ ನೀಡಿರುವ ವರದಿಯನ್ನು ಜಾರಿಗೊಳಿಸಿ ಎಸ್‌ಸಿ ಹಾಗೂ ಎಸ್‌ಟಿಗಳಿಗೆ ಜನಸಂಖ್ಯೆಗನುಗುಣವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಹೆಚ್ಚಿಸುವಂತೆ ಒತ್ತಾಯಿಸಿ ಜು.12ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ದಸಂಸ ಹಾಗೂ ಕೊರಗ ಸಂಘಟನೆಗಳ ಮುಖಂಡರು ಇಂದಿಲ್ಲಿ ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ನ್ಯಾ.ಎಚ್.ಎನ್. ನಾಗಮೋಹನದಾಸ್ ಆಯೋಗ ನೀಡಿರುವ ವರದಿಯಂತೆ ಪರಿಶಿಷ್ಟ ಜಾತಿ (ಎಸ್‌ಸಿ)ಗಳಿಗೆ ಶೇ.೧೫ರಿಂದ ಶೇ.೧೭ಕ್ಕೆ ಹಾಗೂ ಪರಿಶಿಷ್ಟ ಪಂಗಡ (ಎಸ್‌ಟಿ) ಗಳಿಗೆ ಶೇ.೩ರಿಂದ ಶೇ.೭ಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕಾಗಿದೆ ಎಂದರು.
ಈ ವರದಿಯನ್ನು ಜಾರಿಗೊಳಿಸುವಲ್ಲಿ ರಾಜ್ಯ ಸರಕಾರದ ವಿಳಂಬ ನೀತಿಯನ್ನು ವಿರೋಧಿಸಿ ಹಾಗೂ ಮೀಸಲಾತಿಯನ್ನು ಹೆಚ್ಚಿಸುವಂತೆ ಒತ್ತಾಯಿಸಿ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಗಳು ಕಳೆದ ಫೆ.೧೦ರಿಂದ ಅಂದರೆ ೧೪೫ ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಅನಿರ್ದಿಷ್ಟ ಕಾಲದ ಧರಣಿ ಸತ್ಯಾಗ್ರಹವನ್ನು ನಡೆಸುತಿದ್ದಾರೆ ಎಂದು ಸುಂದರ ಮಾಸ್ತರ್ ತಿಳಿಸಿದರು.
ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಗಳು ಕೈಗೊಂಡಿರುವ ಸತ್ಯಾಗ್ರಹವನ್ನು ಎಲ್ಲಾ ಎಸ್‌ಸಿ,ಎಸ್‌ಟಿ ಸ್ವಾಮೀಜಿಗಳು, ದಲಿತ ಸಂಘಟನೆಗಳು, ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಅರಣ್ಯವಾಸಿ, ಅಲೆಮಾರಿ ಹಾಗೂ ಬಡುಕಟ್ಟು ಸಂಘಟನೆಗಳು ಬೆಂಬಲಿಸಿವೆ. ಧರಣಿಯನ್ನು ಬೆಂಬಲಿಸಿ ಈಗಾಗಲೇ ಹಲವು ವಿಧದ ಹೋರಾಟ ನಡೆಸಲಾಗಿದೆ ಎಂದವರು ಹೇಳಿದರು.
ನ್ಯಾ.ನಾಗಮೋಹನದಾಸ್ ವರದಿ ರಾಜ್ಯ ಸರಕಾರದ ಕೈಸೇರಿ ಈಗಾಗಲೇ ಎರಡು ವರ್ಷಗಳಾದರೂ, ಸರಕಾರ ವರದಿಯನ್ನು ಜಾರಿಗೊಳಿಸುವ ಬದಲು ಮೀಸಲಾತಿ ಹೆಚ್ಚಿಸಲು ಇಚ್ಛಾಶಕ್ತಿ ಇಲ್ಲದಂತೆ ವರ್ತಿಸುತ್ತಿದೆ. ವರದಿಯನ್ನು ಜಾರಿ ಗೊಳಿಸುವ ಬದಲು ಅದನ್ನು ನ್ಯಾ. ಸುಭಾಷ್ ಅಡಿ ನೇತೃತ್ವದ ಮತ್ತೊಂದು ಸಮಿತಿಗೆ ಪರಿಶೀಲನೆಗಾಗಿ ಸಲ್ಲಿಸಿದೆ. ಈ ಮೂಲಕ ಸರಕಾರ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ಸುಂದರ್ ಮಾಸ್ತರ್ ಆರೋಪಿಸಿದರು.
ಸರಕಾರದ ಈ ಧೋರಣೆಯನ್ನು ಖಂಡಿಸಿ ಇದೇ ಜು.೧೨ರಂದು ಕರ್ನಾಟಕ ರಾಜ್ಯ ಸ್ವಾಭಿಮಾನಿ ಎಸ್‌ಸಿ ಮತ್ತು ಎಸ್‌ಟಿ ಸಂಘಟನೆಗಳ ಒಕ್ಕೂಟ ಹಾಗೂ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾಸಮಿತಿಯ ಮೂಲಕ ಬೆಳಗ್ಗೆ ೧೧ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹೋರಾಟ ನಡೆಸಲಾಗುತ್ತದೆ ಎಂದವರು ತಿಳಿಸಿದರು.
ಹಕ್ಕೊತ್ತಾಯ: ಈ ಹೋರಾಟದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಜನಾಂಗದ ಒಟ್ಟು ೨೪ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಸರಕಾರವನ್ನು ಆಗ್ರಹಿಸಲಾಗುವುದು. ಇವುಗಳಲ್ಲಿ ನ್ಯಾ.ನಾಗಮೋಹನ್‌ದಾಸ್ ಆಯೋಗದ ವರದಿಯನ್ನು ತಕ್ಷಣವೇ ಅನುಷ್ಠಾನಕ್ಕೆ ಒತ್ತಾಯ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪೋಟೊವನ್ನು ತೆಗೆಸಿ ಅವಮಾನ ಮಾಡಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ವಜಾಗೊಳಿಸಿ ಬಂಧಿಸಬೇಕು.
ಕಂದಾಯ ಸಚಿವ ಆರ್.ಅಶೋಕ್ ಅಧ್ಯಕ್ಷತೆಯಲ್ಲಿ ಗೋಮಾಳ ಮತ್ತಿತರ ಸರಕಾರಿ ಜಮೀನುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ರಚಿಸಿರುವ ಉಪಸಮಿತಿಯನ್ನು ರದ್ದುಗೊಳಿಸಬೇಕು, ಎಸ್‌ಸಿ ಮತ್ತು ಎಸ್‌ಟಿ ಭೂ ಪರಭಾರೆ ನಿಷೇಧ ಕಾಯ್ದೆಯ ಮುಖ್ಯ ಭಾಗಗಳನ್ನು ನಿಷ್ಕೃಿಯಗೊಳಿಸಿ ಉಚ್ಛನ್ಯಾಯಾಲಯ ನೀಡಿರುವ ತೀರ್ಪಿಗೆ ಸೂಕ್ತ ತಿದ್ದುಪಡಿ ಮಾಡಿ ಎಸ್‌ಸಿ-ಎಸ್‌ಟಿ ರೈತರಿಗೆ ಭೂಮಿ ಹಕ್ಕು ನೀಡುವುದು.
ರಾಜ್ಯದ ೧೧ಸಾವಿರಕ್ಕೂ ಅಧಿಕ ಗ್ರಾಮಗಳಲ್ಲಿ ಎಸ್‌ಸಿ, ಎಸ್‌ಟಿಗಳಿಗೆ ಸ್ಮಶಾನ ಭೂಮಿ ನೀಡಲು ಕೂಡಲೇ ಕ್ರಮಕೈಗೊಳ್ಳಬೇಕು. ಖಾಸಗಿ ಕ್ಷೇತ್ರದಲ್ಲಿ ಎಸ್‌ಸಿ- ಎಸ್‌ಟಿ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕು, ಗುತ್ತಿಗೆ, ಹೊರಗುತ್ತಿಗೆ ಪದ್ಧತಿ ರದ್ದು ಮಾಡಿ ನೌಕರರ ಸೇವೆಯನ್ನು ಖಾಯಂ ಗೊಳಿಸಬೇಕು, ಗ್ರಾಮಸಹಾಯಕರು ಮತ್ತು ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಬೇಕು. ಹೊಸ ಶಿಕ್ಷಣ ನೀತಿಯಲ್ಲಿ ಉನ್ನತ ವ್ಯಾಸಂಗಕ್ಕೆ ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ತಪ್ಪಿಸಲಾಗಿರುವ ಉನ್ನತ ವ್ಯಾಸಂಗಕ್ಕೆ ಈಗಿನಂತೆ ಮೀಸಲಾತಿ ಅವಕಾಶ ಕಲ್ಪಿಸಬೇಕು. ಸರಕಾರಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಕೂಡಲೇ ತುಂಬಬೇಕು ಇವೇ ಮುಂತಾದ ೨೪ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೊರಗ ಮುಖಂಡ ಗಣೇಶ್ ಕುಂದಾಪುರ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ಉಪ್ಪೂರು, ಉಡುಪಿ ಮರಾಠಿ ಸಂಘಟನೆಯ ಜಿಲ್ಲಾಧ್ಯಕ್ಷ ಅನಂತ ನಾಯ್ಕ್ ಉಪಸ್ಥಿತರಿದ್ದರು.