ಗೋಧ್ರಾ ರೈಲು ಬೆಂಕಿ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ
ರಫೀಕ್ ಹುಸೈನ್ (ANI Photo)
ಅಹ್ಮದಾಬಾದ್: ಗೋಧ್ರಾ ರೈಲು ಬೋಗಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ರಫೀಕ್ ಹುಸೈನ್ ಭಾಟುಕ್ಗೆ ಜೀವಾವಧಿ ಶಿಕ್ಷೆ ವಿಧಿಸಿ ಗೋಧ್ರಾ ಸೆಷನ್ಸ್ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ ಎಂದು hindustantimes.com ವರದಿ ಮಾಡಿದೆ.
ಹತ್ಯೆ ಪಿತೂರಿ ಆರೋಪದಲ್ಲಿ ನ್ಯಾಯಾಲಯ ಆರೋಪಿಗೆ ಶಿಕ್ಷೆ ನೀಡಿದೆ ಎಂದು ಸರ್ಕಾರಿ ಅಭಿಯೋಜಕ ಆರ್.ಸಿ. ಕೊಡೇಕರ್ ಹೇಳಿದ್ದಾರೆ.
19 ವರ್ಷ ಕಾಲ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಗುಜರಾತ್ ಪೊಲೀಸರು ಗೋಧ್ರಾ ಪಟ್ಟಣದಲ್ಲಿ ಕಳೆದ ವರ್ಷದ ಫೆಬ್ರುವರಿ 14ರಂದು ಬಂಧಿಸಿದ್ದರು. ಈ ಸಂಚಿನಲ್ಲಿ ಷಾಮೀಲಾಗಿದ್ದ "ಕೋರ್ ಗುಂಪಿನಲ್ಲಿ" ಭಟೂಕ್ ಸೇರಿದ್ದ ಎಂದು ಪೊಲೀಸರು ಹೇಳಿದ್ದರು. ಖಚಿತ ಮಾಹಿತಿಯನ್ನು ಆಧರಿಸಿ ಗೋಧ್ರಾ ಪೊಲೀಸರು ರೈಲು ನಿಲ್ದಾಣ ಸಮೀಪದ ಸಿಗ್ನಲ್ ಫಲಿಯಾ ಪ್ರದೇಶದ ಮನೆಯೊಂದರ ಮೇಲೆ ದಾಳಿ ನಡೆಸಿ ಭಟೂಕ್ನನ್ನು ಬಂಧಿಸಿದ್ದರು.
ಇಡೀ ಪಿತೂರಿಯನ್ನು ರೂಪಿಸಿದ ಗುಂಪಿನ ಭಾಗವಾಗಿದ್ದ ಭಟೂಕ್, ಗುಂಪಿಗೆ ಪ್ರಚೋದನೆ ನೀಡಿದ್ದು ಮಾತ್ರವಲ್ಲದೇ ರೈಲಿಗೆ ಬೆಂಕಿ ಹಚ್ಚಲು ಪೆಟ್ರೋಲ್ ಕೂಡಾ ವ್ಯವಸ್ಥೆಗೊಳಿಸಿದ್ದ ಎಂದು ಆಪಾದಿಸಲಾಗಿತ್ತು. ತನಿಖೆ ವೇಳೆ ಈತನ ಹೆಸರು ಕೇಳಿ ಬಂದ ತಕ್ಷಣ ಆರೋಪಿ ದೆಹಲಿಗೆ ಪಲಾಯನ ಮಾಡಿದ್ದ. ಇತರ ಆರೋಪಿಗಳ ಜತೆಗೆ ಹತ್ಯೆ ಮತ್ತು ದೊಂಬಿ ಆರೋಪವನ್ನೂ ಈತ ಎದುರಿಸುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.