ಅಂತರಾಷ್ಟ್ರೀಯ ಮನ್ನಣೆ ನೀಡುವಂತೆ ವಿದೇಶಿ ಸರಕಾರಗಳಿಗೆ ತಾಲಿಬಾನ್ ಆಗ್ರಹ

ಕಾಬೂಲ್, ಜು.3: ಅಫ್ಘಾನ್‌ನ ರಾಜಧಾನಿ ಕಾಬೂಲ್‌ನಲ್ಲಿ ತಾಲಿಬಾನ್ ಆಶ್ರಯದಲ್ಲಿ ನಡೆಯುತ್ತಿರುವ ಧಾರ್ಮಿಕ ಮುಖಂಡರು ಹಾಗೂ ಹಿರಿಯರ ಸಮಾವೇಶದಲ್ಲಿ ಅಫ್ಘಾನ್ ಸರಕಾರಕ್ಕೆ ಮನ್ನಣೆ ನೀಡುವಂತೆ ವಿದೇಶಗಳ ಸರಕಾರವನ್ನು ಆಗ್ರಹಿಸಲಾಗಿದೆ.
ಆದರೆ ಬಾಲಕಿಯರ ಶಿಕ್ಷಣ, ಮಹಿಳಾ ಹಕ್ಕುಗಳು ಸೇರಿದಂತೆ ಹಲವು ಧೋರಣೆಗಳಲ್ಲಿ ಬದಲಾವಣೆ ತರಬೇಕೆಂಬ ಅಂತರಾಷ್ಟ್ರೀಯ ಸಮುದಾಯದ ಬೇಡಿಕೆಗಳ ಬಗ್ಗೆ ಮೌನ ವಹಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಾಬೂಲ್‌ನ ಪಾಲಿಟೆಕ್ನಿಕ್ ವಿವಿಯಲ್ಲಿ ಗುರುವಾರ ಆರಂಭಗೊಂಡ 3 ದಿನಗಳ ಸಭೆಯಲ್ಲಿ 3 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಂಡಿದ್ದು ಅಫ್ಘಾನ್‌ನಲ್ಲಿ ತಾಲಿಬಾನ್ ಆಡಳಿತಕ್ಕೆ ಒಪ್ಪಿಗೆಯ ಮುದ್ರೆ ಪಡೆಯವುದು ಸಭೆಯ ಮುಖ್ಯ ಉದ್ದೇಶವಾಗಿತ್ತು ಎಂದು ವರದಿ ತಿಳಿಸಿದೆ.
ಕಳೆದ ಆಗಸ್ಟ್‌ನಲ್ಲಿ ಅಫ್ಘಾನ್ ತಾಲಿಬಾನ್‌ಗಳ ನಿಯಂತ್ರಣಕ್ಕೆ ಬಂದ ಬಳಿಕ, ಮಾನವ ಹಕ್ಕುಗಳು, ವಿಶೇಷವಾಗಿ ಮಹಿಳೆಯರ ಹಕ್ಕುಗಳನ್ನು ಖಾತರಿಪಡಿಸುವ ಅಗತ್ಯವಿದೆ ಎಂದು ತಾಲಿಬಾನ್ ಆಡಳಿತಕ್ಕೆ ಸೂಚಿಸಿದ್ದ ಪಾಶ್ಚಿಮಾತ್ಯ ಸರಕಾರಗಳು ನಿರ್ಬಂಧ ಜಾರಿಗೊಳಿಸಿದ ಜತೆಗೆ ಆರ್ಥಿಕ ನೆರವನ್ನು ಸ್ಥಗಿತಗೊಳಿಸಿದ್ದರಿಂದ ಅಫ್ಘಾನ್‌ನ ಅರ್ಥವ್ಯವಸ್ಥೆ ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ.
ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನಕ್ಕೆ ಮನ್ನಣೆ ನೀಡುವಂತೆ ಪ್ರಾದೇಶಿಕ ಹಾಗೂ ಅಂತರಾಷ್ಟ್ರೀಯ ದೇಶಗಳಿಗೆ, ವಿಶೇಷವಾಗಿ ಇಸ್ಲಾಮಿಕ್ ದೇಶಗಳನ್ನು ಕೋರಿಕೊಳ್ಳುತ್ತಿದ್ದೇವೆ. ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಿ, ನಮ್ಮ ಸೆಂಟ್ರಲ್ ಬ್ಯಾಂಕ್‌ನ ನಿಧಿಯನ್ನು ಬಿಡುಗಡೆಗೊಳಿಸುವಂತೆ ಮತ್ತು ಅಫ್ಘಾನಿಸ್ತಾನದ ಅಭಿವೃದ್ಧಿಗೆ ನೆರವಾಗುವಂತೆ ಕರೆ ನೀಡುತ್ತಿದ್ದೇವೆ ಎಂದು ಸಮಾವೇಶದಲ್ಲಿ ಪಾಲ್ಗೊಂಡ ಮುಖಂಡರು ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಸಮಾವೇಶದಲ್ಲಿ ಶುಕ್ರವಾರ ತಾಲಿಬಾನ್‌ನ ಪರಮೋಚ್ಛ ಮುಖಂಡ ಮುಲ್ಲಾ ಹೈಬತುಲ್ಲಾ ಅಖುಂದ್‌ಝಾದ ಸಹಿತ ಸುಮಾರು 4000 ಮುಖಂಡರು, ಧರ್ಮಗುರುಗಳು ಪಾಲ್ಗಿಂಡಿದ್ದರು.
ಸಮಾವೇಶದ ಅಂತಿಮ ದಿನ ಬೆರಳೆಣಿಕೆಯಷ್ಟು ಪ್ರತಿನಿಧಿಗಳು ಬಾಲಕಿಯರ ಮತ್ತು ಮಹಿಳೆಯರ ಶಿಕ್ಷಣದ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಲಿಬಾನ್ ಮುಖಂಡ ಮತ್ತು ಆಂತರಿಕ ಸಚಿವ ಸಿರಾಜುದ್ದೀನ್ ಹಖ್ಖಾನಿ, ಜಾಗತಿಕ ಸಮುದಾಯವು ಎಲ್ಲರನ್ನೂ ಒಳಗೊಂಡ ಸರಕಾರ ಮತ್ತು ಶಿಕ್ಷಣ ವ್ಯವಸ್ಥೆ ರಚನೆಗೆ ಆಗ್ರಹಿಸಿದೆ. ಈ ವಿಷಯಗಳ ಬಗ್ಗೆ ನಿರ್ಧರಿಸಲು ಇನ್ನಷ್ಟು ಸಮಯ ಬೇಕಾಗುತ್ತದೆ ಎಂದರು.







