ಬೆಳ್ಳೆಯ ದಲಿತರ ಮನೆಗಳಿಗೆ ಜಲ ದಿಗ್ಬಂಧನ: ದಸಂಸ ನಿಯೋಗ ಭೇಟಿ
ಶಿರ್ವ, ಜು.4: ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಣಪನಕಟ್ಟೆ ಎಂಬಲ್ಲಿ ಭಾರೀ ಮಳೆಯಿಂದ ಪರಿಶಿಷ್ಟ ಜಾತಿಗೆ ಸೇರಿದ ಕಮಲ, ಕೃಷ್ಣ, ಕರುಣಾಕರ ಎಂಬವರ ಮನೆಗಳು ಜಲ ದಿಗ್ಬಂಧನಕ್ಕೆ ಒಳಗಾಗಿವೆ. ರವಿವಾರ ಈ ಸ್ಥಳಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿ ನಿಯೋಗ ಭೇಟಿ ನೀಡಿತು.
ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ನೇತೃತ್ವದಲ್ಲಿ ಜಿಲ್ಲಾ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ದಲಿತರ ಜಾಗದ ಪಕ್ಕದಲ್ಲೇ ಒಂದು ವಸತಿ ಸಮುಚ್ಚಯ ನಿರ್ಮಿಸಲಾಗುತ್ತಿದ್ದು, ಆ ಜಾಗ ಸಮತಟ್ಟು ಮಾಡುವ ಸಮಯ ದಲ್ಲಿ ಸಾಕಷ್ಟು ಮಣ್ಣುಗಳನ್ನು ದಲಿತರ ಜಾಗಕ್ಕೂ ಸುರಿಯಲಾಗಿದೆ. ಇದರಿಂದಾಗಿ ನೂರಾರು ವರ್ಷಗಳಿಂದ ಇದ್ದ ನೀರಿನ ಹರಿವಿಗೆ ತಡೆ ಉಂಟಾಗಿ ಕೃತ ನೆರೆ ಸೃಷ್ಟಿಯಾಗಿದೆ ಎಂದು ಆರೋಪಿಸಿದೆ.
ಸಮಿತಿಯು ಕೂಡಲೇ ಜಿಲ್ಲಾಧಿಕಾರಿ ಮತ್ತು ಶಿರ್ವ ಪೊಲೀಸ್ ಠಾಣಾಧಿಕಾರಿ ಯನ್ನು ಸಂಪರ್ಕಿಸಿ ಸಮಸ್ಯೆಯ ಗಂಭಿರತೆಯನ್ನು ವಿವರಿಸಿತು. ಇದಕ್ಕೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ, ಸ್ಥಳಕ್ಕೆ ಪಂಚಾಯತ್ ಅಧಿಕಾರಿಗಳನ್ನು ಕಳುಹಿಸಿ ಕೊಟ್ಟು ಪರಿಶೀಲಿಸಿದರು. ಹಾಗೆಯೇ ಶಿರ್ವ ಪೋಲಿಸ್ ಠಾಣಾಧಿಕಾರಿ ರಾಘವೇಂದ್ರ ಸ್ಥಳಕ್ಕೆ ಆಗಮಿಸಿ ಸೂಕ್ತ ಪರಿಹಾರೋಪಾಯದ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ವಸತಿ ಸಮುಚ್ಚಯದ ನಿರ್ಮಾಣದ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು ನೀರಿನ ಹರಿವಿಗೆ ಸರಿಯಾದ ವೈಜ್ಞಾನಿಕ ಚರಂಡಿ ವ್ಯವಸ್ಥೆ ಮತ್ತು ಸುತ್ತಲಿನ ಗುಡ್ಡಗಳಿಗೆ ಸರಿಯಾದ ತಡೆಗೋಡೆ ನಿರ್ಮಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಭಾರೀ ದುರಂತ ಎದುರಿಸಬೇಕಾಗಬಹುದು. ಆದ್ದರಿಂದ ಜಿಲ್ಲಾಧಿಕಾರಿ ಈ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ಸುಂದರ ಮಾಸ್ತರ್ ಒತ್ತಾಯಿಸಿದರು.
ನಿಯೋಗದಲ್ಲಿ ಜಿಲ್ಲಾ ಸಂಘಟಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಶ್ಯಾಮಸುಂದರ ತೆಕ್ಕಟ್ಟೆ, ರಾಘವ ಬೆಳ್ಳೆ, ಶಿವರಾಮ ಕಾಪು, ಅಣ್ಣಪ್ಪಕೊಳಲಗಿರಿ, ಶಿವಾನಂದ ಬಿರ್ತಿ, ಕೃಷ್ಣ ಬೆಳ್ಳೆ, ಕರುಣಾಕರ, ಪ್ರಶಾಂತ್ ಬಿರ್ತಿ ಹಾಜರಿದ್ದರು.