ವಿದೇಶಿ ಹಣ ಪಡೆಯಲಾಗಿದೆ ಎಂಬ ಆರೋಪ ಹೊರಿಸಿ ನಮ್ಮ ಸಂಸ್ಥೆಯನ್ನು ಮುಚ್ಚಿಸುವ ಯತ್ನ: ಆಲ್ಟ್ ನ್ಯೂಸ್
![ವಿದೇಶಿ ಹಣ ಪಡೆಯಲಾಗಿದೆ ಎಂಬ ಆರೋಪ ಹೊರಿಸಿ ನಮ್ಮ ಸಂಸ್ಥೆಯನ್ನು ಮುಚ್ಚಿಸುವ ಯತ್ನ: ಆಲ್ಟ್ ನ್ಯೂಸ್ ವಿದೇಶಿ ಹಣ ಪಡೆಯಲಾಗಿದೆ ಎಂಬ ಆರೋಪ ಹೊರಿಸಿ ನಮ್ಮ ಸಂಸ್ಥೆಯನ್ನು ಮುಚ್ಚಿಸುವ ಯತ್ನ: ಆಲ್ಟ್ ನ್ಯೂಸ್](https://www.varthabharati.in/sites/default/files/images/articles/2022/07/4/341185-1656931702.jpg)
ಹೊಸದಿಲ್ಲಿ: ವಿದೇಶಿ ಹಣ ಪಡೆಯಲಾಗಿದೆ ಎಂಬ ಆರೋಪಗಳನ್ನು ಫ್ಯಾಕ್ಟ್ ಚೆಕ್ಕಿಂಗ್ ವೆಬ್ಸೈಟ್ ಆಲ್ಟ್ ನ್ಯೂಸ್ ಮತ್ತದರ ಮಾತೃ ಸಂಸ್ಥೆ ಪ್ರಾವ್ಡಾ ಮೀಡಿಯಾ ಫೌಂಡೇಶನ್ ನಿರಾಕರಿಸಿವೆ ಹಾಗೂ ಈ ಕುರಿತು ಜಂಟಿ ಹೇಳಿಕೆ ನೀಡಿವೆ. "ವಿದೇಶಿ ದೇಣಿಗೆ ಪಡೆದಿದೆ ಎಂಬ ಆರೋಪದ ಹಿಂದೆ ಸಂಸ್ಥೆಯನ್ನು ಮುಚ್ಚುವ ಪ್ರಯತ್ನವಿದೆ, ಇಂತಹ ಯತ್ನದ ವಿರುದ್ಧ ನಾವು ಹೋರಾಡುತ್ತೇವೆ ಮತ್ತು ಜಯಿಸುತ್ತೇವೆ" ಎಂದು ಹೇಳಿಕೆ ತಿಳಿಸಿದೆ.
"ನಾವು ದೇಣಿಗೆಗಳನ್ನು ಸ್ವೀಕರಿಸುವ ಪೇಮೆಂಟ್ ಪ್ಲಾಟ್ಫಾರ್ಮ್ ವಿದೇಶಿ ಮೂಲಗಳಿಂದ ದೇಣಿಗೆ ಸ್ವೀಕರಿಸಲು ಅನುಮತಿಸುವುದಿಲ್ಲ ಹಾಗೂ ನಾವು ಭಾರತೀಯ ಬ್ಯಾಂಕ್ ಖಾತೆಗಳಿಂದ ಮಾತ್ರ ದೇಣಿಗೆಗಳನ್ನು ಪಡೆದಿದ್ದೇವೆ. ಈ ಎಲ್ಲಾ ದೇಣಿಗೆಗಳು ಸಂಸ್ಥೆಯ ಬ್ಯಾಂಕ್ ಖಾತೆಗೆ ಜಮೆಯಾಗುತ್ತವೆ" ಎಂದು ಹೇಳಿಕೆ ತಿಳಿಸಿದೆ.
ದೇಣಿಗೆಗಳು ಇದೀಗ ಬಂಧಿತ ಆಲ್ಟ್ ನ್ಯೂಸ್ ಸಹಸ್ಥಾಪಕ ಮೊಹಮ್ಮದ್ ಝುಬೈರ್ ಅವರ ಖಾತೆಗೆ ನೇರವಾಗಿ ಹೋಗುತ್ತಿವೆ ಎಂದು ಪೊಲೀಸರು ಕಂಡುಕೊಂಡಿದ್ದಾರೆಂದು ಕೆಲ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿದ ಆಲ್ಟ್ ನ್ಯೂಸ್, "ಸಂಸ್ಥೆಯಲ್ಲಿರುವ ವ್ಯಕ್ತಿಗಳು ತಮ್ಮ ವೈಯಕ್ತಿಕ ಖಾತೆಗಳಿಗೆ ಹಣ ನೇರವಾಗಿ ಪಡೆದಿದ್ದಾರೆಂಬ ಆರೋಪಗಳು ಸುಳ್ಳು ಹಾಗೂ ಸಂಸ್ಥೆಗೆ ಸೇರಿರುವವರು ಮಾಸಿಕ ಸಂಭಾವನೆ ಮಾತ್ರ ಪಡೆಯುತ್ತಾರೆ" ಎಂದು ಸ್ಪಷ್ಟಪಡಿಸಿದೆ. 2018ರಲ್ಲಿ ಮಾಡಿದ ಟ್ವೀಟ್ ಇಂದು ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡಿದೆ ಎಂಬ ಆರೋಪದ ಮೇಲೆ ದಿಲ್ಲಿ ಪೊಲೀಸರು ಆಲ್ಟ್ ನ್ಯೂಸ್ ಸಹಸ್ಥಾಪಕ ಮೊಹಮ್ಮದ್ ಝುಬೈರ್ ಅವರನ್ನು ಬಂಧಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಈಗ ಪೊಲೀಸರು ಅವರ ವಿರುದ್ಧ ಕ್ರಿಮಿನಲ್ ಸಂಚು, ಸಾಕ್ಷ್ಯನಾಶ ಹಾಗೂ ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.
Our statement regarding the recent allegations: pic.twitter.com/XwfpE7egcJ
— Alt News (@AltNews) July 4, 2022