ದ.ಕ.ಜಿಲ್ಲೆಯಲ್ಲಿ ನಿರಂತರ ಮಳೆ ; ಮುಂದುವರಿದ ಹಾನಿ

ಮಂಗಳೂರು: ದ.ಕ.ಜಿಲ್ಲಾದ್ಯಂತ ಸೋಮವಾರ ನಿರಂತರ ಮಳೆ ಸುರಿದಿದೆ. ಪರಿಣಾಮ ಹಾನಿಯೂ ಮುಂದು ವರಿದಿದೆ. ಬೆಳ್ತಂಗಡಿ ತಾಲೂಕಿನಾದ್ಯಂತ ರವಿವಾರ ರಾತ್ರಿಯಿಂದಲೇ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ಕಳೆದ ಗುರುವಾರ ಆರಂಭಗೊಂಡ ಮಳೆಯು ಶುಕ್ರವಾರ ಮತ್ತು ಶನಿವಾರ ಬಿರುಸು ಪಡೆದಿದ್ದರೆ, ರವಿವಾರ ಭಾಗಶಃ ಬಿಡುವು ಪಡೆದಿತ್ತು. ಜಿಲ್ಲೆಯ ಕೆಲವು ಕಡೆಗಳಲ್ಲಿ ಉರಿ ಬಿಸಿಲಿನ ವಾತಾವರಣವೂ ಇತ್ತು. ಆದರೆ ಸಂಜೆಯ ಬಳಿಕ ನಿರಂತರ ಮಳೆ ಸುರಿಯಲಾರಂಭಿಸಿದ್ದು, ಸೋಮವಾರವೂ ಮುಂದುವರಿದಿತ್ತು.
ಸೋಮವಾರ ಸುರಿದ ಭಾರೀ ಮಳೆಯೊಡನೆ ಹಾನಿಯೂ ಮುಂದುವರಿದಿದೆ. ಮಂಗಳೂರಿನಲ್ಲಿ ೨ ಮತ್ತು ಬೆಳ್ತಂಗಡಿಯಲ್ಲಿ ೧ ಸಹಿತ ಮೂರು ಮನೆಗಳು ಸಂಪೂರ್ಣ ಹಾನಿಗೀಡಾಗಿದೆ. ಮಂಗಳೂರು ಮತ್ತು ಮೂಡುಬಿದಿರೆ ಯಲ್ಲಿ ತಲಾ ೩, ಪುತ್ತೂರು ಮತ್ತು ಬೆಳ್ತಂಗಡಿಯಲ್ಲಿ ತಲಾ ೧, ಸುಳ್ಯ ಮತ್ತು ಮುಲ್ಕಿಯಲ್ಲಿ ತಲಾ ೨ ಸಹಿತ ಜಿಲ್ಲೆಯಲ್ಲಿ ೧೨ ಮನೆಗಳಿಗೆ ಭಾಗಶಃ ಹಾನಿಗೀಡಾಗಿದೆ. ಒಟ್ಟಾರೆ ಈವರೆಗೆ ೪೧ ಮನೆಗಳು ಸಂಪೂರ್ಣ ಮತ್ತು ೩೩೬ ಮನೆಗಳಿಗೆ ಭಾಗಶಃ ಹಾನಿಯಾಗಿವೆ.
ಸೋಮವಾರ ೭೧ ವಿದ್ಯುತ್ ಕಂಬಗಳ ಸಹಿತ ಜಿಲ್ಲೆಯಲ್ಲಿ ಈವರೆಗೆ ೨೫೧೯ ಕಂಬಗಳು ನೆಲಕ್ಕೆ ಉರುಳಿವೆ. ಅಲ್ಲದೆ ೧ಟ್ರಾನ್ಸ್‌ಫಾರ್ಮರ್ ಸಹಿತ ಈವರೆಗೆ ೧೭೭ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ ಎಂದು ದ.ಕ.ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ನಗರದ ಪಡೀಲ್ ಅಂಡರ್‌ಪಾಸ್, ಪಡೀಲ್ ರಾಷ್ಟ್ರೀಯ ಹೆದ್ದಾರಿ, ಪಂಪ್‌ವೆಲ್ ಮೊದಲಾದೆಡೆಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡು ಕೃತಕ ನೆರೆ ಭೀತಿ ಸೃಷ್ಟಿಸಿತ್ತು. ಕೆಲವೆಡೆ ತಡೆಗೋಡೆ ಕುಸಿತ, ಮರಗಳು ಬಿದ್ದು, ವಿದ್ಯುತ್ ವ್ಯತ್ಯಯ ಉಂಟಾಯಿತು.
ಮಂಗಳವಾರ ಆರೆಂಜ್ ಅಲರ್ಟ್
ದ.ಕ.ಜಿಲ್ಲೆಯಲ್ಲಿ ಮಂಗಳವಾರವೂ ಆರೆಂಜ್ ಘೋಷಿಸಲಾಗಿದ್ದು, ಮಳೆ ಮುಂದುವರಿಯುವ ಸಾಧ್ಯತೆ ಇದೆ. ಬುಧವಾರದಿಂದ ಎರಡು ದಿನಗಲ ಕಾಲ ಯೆಲ್ಲೊ ಅಲರ್ಟ್ ಇದೆ.
ಕರಾವಳಿ ತೀರದಲ್ಲಿ ಗಂಟೆಗೆ ೪೦-೫೦ರಿಂದ ೬೦ ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
ಈ ಮಧ್ಯೆ ಸಮುದ್ರವೂ ಪ್ರಕ್ಷುಬ್ಧಗೊಂಡಿದ್ದು, ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಉಳ್ಳಾಲದ ಬಟಪಾಡಿಯಲ್ಲಿ ಸಮುದ್ರದ ಅಲೆಯ ಅಬ್ಬರ ಜೋರಾಗಿದೆ.