ಭಾರಿ ಮಳೆ : ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಅಪಾರ ಹಾನಿ

ಉಳ್ಳಾಲ: ಕೆಲವು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಗೆ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಅಪಾರ ಹಾನಿಯಾದ ಬಗ್ಗೆ ವರದಿಯಾಗಿದೆ.
ಸೋಮೇಶ್ವರ ಕುಜುಮಗದ್ದೆಯಲ್ಲಿ ವಾಸು ಪೂಜಾರಿ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಮಂಜನಾಡಿ ಗ್ರಾಮ ದ ಕಂಡಿಕ ಬಾವುರವರ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಹಾನಿಯಾಗಿದೆ. ಪಜೀರ್ ಗ್ರಾಮದ ಅರ್ಕಾಣ ಬಳಿ ಇಸ್ಮಾಯಿಲ್ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಕೋಟೆಕಾರ್ ನಲ್ಲಿ ಫಾರೂಕ್ ರವರ ಮನೆಗೆ ಹಾನಿಯಾಗಿದೆ. ಬೀಪಾತುಮ್ಮ ರವರ ಬಾವಿ ಮತ್ತು ಶೆಡ್ ಗೆ ಮರ ಬಿದ್ದು ಹಾನಿಯಾಗಿದೆ.
ಉಳ್ಳಾಲ ಕಡಲ್ಕೊರೆತ ತೀವ್ರ ಗೊಂಡಿದ್ದು ಸೋಮೇಶ್ವರದ ಬಟ್ಟಂಪಾಡಿಯಲ್ಲಿ ರಸ್ತೆ ಸಂಪೂರ್ಣ ಸಮುದ್ರ ಪಾಲಾಗಿದೆ. ಸಮುದ್ರದ ಅಲೆ ರಸ್ತೆ ದಾಟಿ ರಾಜೀವಿ ಎಂಬವರ ಮನೆ ಮನೆಗೆ ಅಪ್ಪಳಿಸುತ್ತಿದೆ. ಈ ಕುಟುಂಬ ವನ್ನು ಬೀರಿಗೆ ಸ್ಥಳಾಂತರಿಸಲಾಗಿದೆ. ಸೋಮವಾರ ಸುರಿದ ಮಳೆಯಿಂದ ಒಂಭತ್ತು ಮನೆಗಳು ಅಪಾಯ ದಂಚಿನಲ್ಲಿವೆ. ಸೀಗ್ರೌಂಡ್ ಬಳಿ ಕಡಲ್ಕೊರೆತ ತೀವ್ರ ಗೊಂಡ ಹಿನ್ನೆಲೆಯಲ್ಲಿ ಬಹಳಷ್ಟು ಕುಟುಂಬ ಭೀತಿಯಲ್ಲಿ ಇದೆ. ಘಟನಾ ಸ್ಥಳಕ್ಕೆ ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮಾತಾಡಿ, ಗ್ರಾಮಕರಣಿಕ ಲಾವಣ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಳೆಗಾಲದಲ್ಲಿ ಕಡಲ್ಕೊರೆತ ತೀವ್ರ ಗೊಂಡು ಮನೆಗಳಿಗೆ ಹಾನಿಯಾಗುವುದು ಸಾಮಾನ್ಯ. ಆದರೆ ಇದಕ್ಕೆ ಪರಿಹಾರ ಒದಗಿಸುವ ಒಂದು ದಾರಿ ಕಂಡುಕೊಂಡಿದೆ ಹೊರತು ಕಡಲ್ಕೊರೆತ ತಡೆಗಟ್ಟಲು ಶಾಶ್ವತ ತಡೆಗೋಡೆ ನಿರ್ಮಿಸುವ ಗೋಜಿಗೆ ಹೋಗುವುದಿಲ್ಲ. ಈ ಕಾರಣ ದಿಂದ ಈ ಭಾಗದಲ್ಲಿ ಜಾಸ್ತಿ ಹಾನಿಯಾಗುವುದು ನಡೆಯುತ್ತಿದೆ ಎಂದು ಸ್ಥಳೀಯರ ತಿಳಿಸಿದ್ದಾರೆ.