ಮೀನುಗಾರಿಕೆಯಿಂದ ರಾಜ್ಯದ ಒಟ್ಟು ಜಿಡಿಪಿಯಲ್ಲಿ ವೃದ್ಧಿ: ಸಿಎಂ ಬೊಮ್ಮಾಯಿ

ಬೆಂಗಳೂರು, ಜು.4: ಮೀನುಗಾರಿಕೆಗೆ ಉತ್ತೇಜನ ನೀಡಿದಷ್ಟೂ ಸ್ವಯಂ ಉದ್ಯೋಗ, ಕೃಷಿಯ ಜೊತೆಗೆ ಮೀನುಗಾರಿಕೆಯಿಂದಲೂ ಆದಾಯ ಹೆಚ್ಚಳವಾಗುತ್ತದೆ ಹಾಗೂ ರಾಜ್ಯದ ಒಟ್ಟು ಜಿಡಿಪಿಯಲ್ಲಿ ವೃದ್ಧಿಯಾಗಲಿದೆ. ಇದನ್ನ ಮನಗಂಡು ಪ್ರಧಾನಿ ನರೇಂದ್ರ ಮೋದಿ ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆಯನ್ನು ಮಾಡಿ ‘ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ’ ಜಾರಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸೋಮವಾರ ಮೀನುಗಾರಿಕೆ ಇಲಾಖೆ ವತಿಯಿಂದ ಕಬ್ಬನ್‍ಪಾರ್ಕ್‍ನಲ್ಲಿ ಆಯೋಜಿಸಲಾಗಿದ್ದ ‘ಸರಕಾರಿ ಮತ್ಸ್ಯಾಲಯದ ಆಧುನೀಕರಣ ಕಾಮಗಾರಿಗಳ’ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದ ಅವರು, ‘ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ’ಯಡಿ ಅತಿ ಹೆಚ್ಚಿನ ಸಹಾಯಧನ ಅತಿ ಹೆಚ್ಚು ಜನರಿಗೆ ದೊರೆತಿದೆ. ಈ ಯೋಜನೆಯ ಸಂಪೂರ್ಣ ಲಾಭವನ್ನು ಮೀನುಗಾರಿಕೆ ಇಲಾಖೆ ಪಡೆದುಕೊಳ್ಳಬೇಕು ಎಂದರು.
ಲಾಲ್‍ಬಾಗ್ ಹಾಗೂ ಮಂಗಳೂರಿನಲ್ಲಿ ಅಕ್ವೇರಿಯಂ: ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಕಬ್ಬನ್‍ಪಾರ್ಕ್‍ನಲ್ಲಿ ಪಿಪಿಪಿ ಮಾದರಿಯಲ್ಲಿ ನಿರ್ಮಾಣವಾಗಲಿರುವ ಅಕ್ವೇರಿಯಂ(ಮತ್ಸ್ಯಾಲಯ) ಉತ್ತಮವಾಗಿ ಮೂಡಿಬರಬೇಕು. ಲಾಲ್‍ಬಾಗ್‍ನಲ್ಲಿಯೂ ಪಿಪಿಪಿ ಮಾದರಿಯಲ್ಲಿ ಅಕ್ವೇರಿಯಂ ನಿರ್ಮಾಣ ಮಾಡಲು ಚಿಂತನೆ ನಡೆದಿದೆ. ಅದೇ ಮಾದರಿಯ ಅಕ್ವೇರಿಯಂ ಅನ್ನು ಮಂಗಳೂರಿನ ಕಡಲತೀರದಲ್ಲಿ ನಿರ್ಮಿಸುವ ಉದ್ದೇಶವಿದೆ. ಸಿಂಗಾಪೂರ್, ದುಬೈ, ಯೂರೋಪ್‍ಗಳಲ್ಲಿರುವ ಟನಲ್ ಅಕ್ವೇರಿಯಂಗಳಂತೆ ಮಕ್ಕಳಿಗೆ ಹೆಚ್ಚಿನ ಆಕರ್ಷಣೆ ಉಂಟು ಮಾಡುವ ರೀತಿಯಲ್ಲಿ ಇದು ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು.
ಆಲಮಟ್ಟಿಯಲ್ಲಿ ಮೀನಿನ ಮರಿ ಸಾಕಾಣಿಕೆ ಕೇಂದ್ರ ಸ್ಥಾಪಿಸಲು ಮೀನುಗಾರಿಗೆ ಇಲಾಖೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದೇ ವರ್ಷದಲ್ಲಿ ಪ್ರಾರಂಭಿಸಲಾಗುವುದು. 2021-2022ನೇ ಸಾಲಿನಲ್ಲಿ ಒಂದು ಮಿಲಿಯನ್ ಟನ್ ಉತ್ಪಾದನೆಯನ್ನು ಮಾಡಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದ ಮುಖ್ಯಮಂತ್ರಿ, ಮೀನುಗಾರಿಕೆ ದೊಡ್ಡ ಉದ್ಯಮವಾಗಿ ಬೆಳೆಯಲು ಅವಕಾಶವಿದ್ದು, ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
10 ಸಾವಿರ ಮನೆಗಳ ನಿರ್ಮಾಣ: ಮೀನುಗಾರಿಕೆ ವೃತಿಯಲ್ಲಿರುವವರಿಗೆ ಒಟ್ಟು 10 ಸಾವಿರ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗುತ್ತಿದೆ. ರೈತ ವಿದ್ಯಾ ನಿಧಿ ಯೋಜನೆಯನ್ನು ಮೀನುಗಾರರು ಹಾಗೂ ನೇಕಾರರ ಮಕ್ಕಳಿಗೂ ವಿಸ್ತರಿಸಲಾಗಿದೆ. ದುಡಿಯುವ ವರ್ಗದಿಂದಲೇ ದೊಡ್ಡ ಬದಲಾವಣೆ ತರಬಹುದು. ಆರ್ಥಿಕತೆ ಎಂದರೆ ಜನರ ಕ್ರಿಯಾಶೀಲತೆ. ದುಡಿಯುವ ವರ್ಗಕ್ಕೆ ಸಹಾಯ ಮಾಡಿದರೆ ಅವರ ಆದಾಯದ ಜೊತೆಗೆ ರಾಜ್ಯದ ಆದಾಯವೂ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.
ದುಡಿಯುವ ಸಂಸ್ಕತಿಯನ್ನು ಸರಕಾರ ತರುತ್ತಿದೆ. ಉದ್ಯೋಗ ನೀತಿಯನ್ನು ರೂಪಿಸಲಾಗುತ್ತಿದೆ. ಹೆಚ್ಚಿನ ಉದ್ಯೋಗ ನೀಡುವ ಉದ್ಯಮಗಳಿಗೆ ವಿಶೇಷ ಪ್ರೋತ್ಸಾಹಕಗಳನ್ನು ನೀಡಲಾಗುತ್ತಿದೆ. ಆಮೂಲಾಗ್ರ ಬದಲಾವಣೆಯನ್ನು ಉದ್ಯೋಗ ಕ್ಷೇತ್ರದಲ್ಲಿ ತರಲಾಗುತ್ತಿದೆ. ವೈಜ್ಞಾನಿಕವಾಗಿ ಮೀನುಗಾರಿಕೆಯನ್ನು ಅಭಿವೃದ್ಧಿಗೊಳಿಸಿ ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುವ ಕನಸಿದೆ. ಅದನ್ನು ನನಸು ಮಾಡಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಆಯವ್ಯಯದಲ್ಲಿ ಮೀನುಗಾರಿಕೆಗೆ ಉತ್ತೇಜನ: ಮೀನುಗಾರಿಕೆಯ ಉತ್ಪಾದನೆ, ಸಂಸ್ಕರಣೆ ಹಾಗೂ ರಫ್ತಿನ ಮೇಲೆ ಹೆಚ್ಚಿನ ಒತ್ತು ನೀಡಿ ಅದಕ್ಕೆ ತಕ್ಕಹಾಗೆ ಕಾರ್ಯಕ್ರಮಗಳನ್ನು ಹಾಗೂ ಹಣಕಾಸಿನ ವ್ಯವಸ್ಥೆಗಳನ್ನು ಜೋಡಿಸಿಕೊಳ್ಳಲಾಗುವುದು. ಈಗಾಗಲೇ ಆಯವ್ಯಯದಲ್ಲಿ ಒಳನಾಡು ಮೀನುಗಾರಿಕೆಗೆ ಪ್ರತಿಯೊಂದು ಗ್ರಾಮ ಪಂಚಾಯತಿಗೆ ಒಂದು ಕೆರೆಯನ್ನು ಮೀಸಲಿಟ್ಟು ಅಲ್ಲಿನ ಆದಾಯವನ್ನು ಪಂಚಾಯತಿಯ ಕಾರ್ಯಕ್ರಮಗಳಿಗೆ ಬಳಕೆ ಮಾಡಲಾಗುವುದು ಎಂದು ಅವರು ಹೇಳಿದರು.
ಸುಮಾರು 2500 ಪಂಚಾಯಿತಿಗಳಲ್ಲಿ ಮೀನುಗಾರಿಕೆ ಕೊಳಗಳನ್ನು ಇದೇ ವರ್ಷದಲ್ಲಿ ಪ್ರಾರಂಭ ಮಾಡಲಾಗುವುದು. ಸಮುದ್ರದಾಳದ ಮೀನುಗಾರಿಕೆಯಲ್ಲಿ ದೊಡ್ಡ ಬದಲಾಣೆಯನ್ನು ತರಲಾಗುತ್ತಿದೆ. ಎಂಟು ಮೀನುಗಾರಿಕೆ ಬಂದುರುಗಳ ಹೂಳು ತೆಗೆಸಿ ದೊಡ್ಡ ಸಾಮಥ್ರ್ಯದ ದೋಣಿಗಳು ಅಲ್ಲಿಗೆ ಬರುವಂತೆ ವ್ಯವಸ್ಥೆ ಮಾಡಿ, ಅವುಗಳ ನವೀಕರಣಕ್ಕಾಗಿ ಆಯವ್ಯಯದಲ್ಲಿ ಅನುದಾನ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಸಮುದ್ರದಾಳದ ಮೀನುಗಾರಿಕೆಗೆ ವಿಶೇಷವಾದ 100 ಹೈಸ್ಪೀಡ್ ದೋಣಿಗಳನ್ನು ಈ ಬಾರಿಯ ಬಜೆಟ್‍ನಲ್ಲಿ ಮಂಜೂರು ಮಾಡಲಾಗಿದೆ. ಇದಕ್ಕೆ 150 ಅರ್ಜಿಗಳು ಈಗಾಗಲೇ ಸ್ವೀಕೃತವಾಗಿವೆ. ಇದೇ ತಿಂಗಳು ಅವುಗಳಿಗೆ ಮಂಜೂರಾತಿ ನೀಡಲು ಇಲಾಖೆ ನಿದೇರ್ಶಕರಿಗೆ ಸೂಚಿಸಿದ್ದೇನೆ. ಸಮುದ್ರದಾಳದ ಮೀನುಗಾರಿಕೆಯಲ್ಲಿ ದೊರೆತ ಮೀನುಗಳಿಗೆ ಸಂಸ್ಕರಣಾ ಘಟಕವನ್ನು ಸ್ಥಾಪಿಸಬಹುದು ಎಂದು ಅವರು ಹೇಳಿದರು.
ಕೆಲವು ದೊಡ್ಡ ಪ್ರಮಾಣದ ಸಂಸ್ಕರಣಾ ಘಟಕಗಳ ಮುಖ್ಯಸ್ಥರೊಂದಿಗೆ ಮಾತನಾಡಿದ್ದು, ನಮ್ಮ ಕಡಲು ತೀರದಲ್ಲಿಯೂ ಅತಿ ಹೆಚ್ಚು ರಫ್ತನ್ನು ಮೀನುಗಾರಿಕೆಯಲ್ಲಿ ಮುಂದಿನ ದಿನಗಳಲ್ಲಿ ಮಾಡಬೇಕು. ಈಗಾಗಲೇ 50ಕ್ಕಿಂತ ಹೆಚ್ಚು ರೈತ ಉತ್ಪಾದಕರ ಸಂಘಗಳ ರಚನೆಯಾಗಿದ್ದು, ಅವುಗಳಿಗೆ ಹೆಚ್ಚಿನ ಇತ್ತು ನೀಡಿ, ಅವುಗಳ ಮುಖಾಂತರ ಮೀನುಗಾರರಿಗೆ ಅಗತ್ಯವಿರುವ ಸವಲತ್ತುಗಳನ್ನು ನೀಡುವ ಕೆಲಸ ಮಾಡಬಹುದು. ಸಂಪೂರ್ಣ ಹವಾನಿಯಂತ್ರಿತ ವಾಹನಗಳನ್ನು ಅಲ್ಲಲ್ಲಿ ಮರುಕಟ್ಟೆ ವ್ಯವಸ್ಥೆಯನ್ನು ಮಾಡುವ ಯೋಜನೆಗೆ ಶೀಘ್ರವಾಗಿ ಮಂಜೂರಾತಿಯನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಮೀನುಗಾರಿಕೆಗೆ ವಿಫುಲ ಅವಕಾಶ: ಕರ್ನಾಟಕದಲ್ಲಿ ಮೀನುಗಾರಿಕೆಯಲ್ಲಿ ವಿಫುಲ ಅವಕಾಶಗಳಿದೆ. ಒಳನಾಡು ಮೀನುಗಾರಿಕೆಗೆ ಸ್ಪಷ್ಟ ನೀತಿ ಇಲ್ಲ. ಕರಾವಳಿ ಮೀನುಗಾರಿಕೆಗೂ, ಒಳನಾಡು ಮೀನುಗಾರಿಕೆಗೆ ವ್ಯತ್ಯಾಸಗಳಿವೆ. ಒಳನಾಡು ಮೀನುಗಾರಿಕೆಗೆ ಮಹತ್ವ ನೀಡಿ, ಮೀನು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಸ್ಥಳೀಯ ಉತ್ಪಾದನೆಗೊಂಡು ಸ್ಥಳೀಯರಿಗೆ ಲಾಭ ಸಿಗಬೇಕಿರುವುದು ಮುಖ್ಯ ಎಂದು ಅವರು ಹೇಳಿದರು.
ಮೀನುಗಾರಿಕೆಯೂ ಕೃಷಿಯಿದ್ದಂತೆ, ಸಮಗ್ರ ಕೃಷಿಯಲ್ಲಿ ಮೀನುಗಾರಿಕೆ, ಹೈನುಗಾರಿಕೆ, ಕುರಿ ಮತ್ತು ಹಂದಿ ಸಾಕಾಣಿಕೆ, ಆಹಾರ ಸಂಸ್ಕರಣೆ, ಮಾರುಕಟ್ಟೆ ಸೇರಿದಂತೆ ಎಲ್ಲವೂ ಒಳಗೊಂಡಿರುತ್ತದೆ. ಈ ಎಲ್ಲ ಅಂಶಗಳನ್ನು ಜೋಡಿಸುವ ಮೂಲಕ ಮೀನುಗಾರಿಕೆ ವಲಯ ಹಾಗೂ ಮೀನುಗಾರರ ಅಭಿವೃದ್ಧಿಗೆ ಮೀನುಗಾರಿಕೆ ಇಲಾಖೆ ಗಮನಹರಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.
ರಾಜ್ಯದಲ್ಲಿ 330 ಕಿ.ಮೀ. ಕರಾವಳಿ ಪ್ರದೇಶವಿದ್ದು, ಮೀನುಗಾರಿಕೆ ಹೆಚ್ಚಿಸಿ, ಸಂಸ್ಕರಿಸಿ, ಮೀನು ರಫ್ತಿಗೆ ವಿಫುಲ ಅವಕಾಶಗಳಿವೆ. ಬರುವ ದಿನಗಳಲ್ಲಿ ಮೀನುಗಾರಿಕೆ ಉತ್ಪಾದನೆ, ಸಂಸ್ಕರಣೆ ಹಾಗೂ ರಫ್ತಿಗೆ ಒತ್ತು ನೀಡುವ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ, ಶಾಸಕ ರಿಝ್ವಾನ್ ಅರ್ಶದ್, ವಿಧಾನಪರಿಷತ್ ಸದಸ್ಯರಾದ ಕೆ.ಗೋವಿಂದರಾಜು, ಎಂ.ನಾಗರಾಜ ಯಾದವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







