ಪಂಜಾಬಿ ಗಾಯಕ ಮೂಸೆವಾಲಾ ಹಂತಕ, ಸಹಾಯಕನ ಬಂಧನ: ಪಿಸ್ತೂಲುಗಳು ವಶ
ಹೊಸದಿಲ್ಲಿ,ಜು.4: ಲಾರೆನ್ಸ್ ಬಿಷ್ಣೋಯಿ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗಿನ ಇಬ್ಬರು ‘ಮೋಸ್ಟ್ ವಾಂಟೆಡ್’ ಪಾತಕಿಗಳನ್ನು ದಿಲ್ಲಿ ಪೊಲೀಸರು ರವಿವಾರ ಇಲ್ಲಿ ಬಂಧಿಸಿದ್ದಾರೆ. ಇವರಲ್ಲಿ ಖ್ಯಾತ ಪಂಜಾಬಿ ಗಾಯಕ ಹಾಗೂ ರಾಜಕಾರಣಿ ಶುಭದೀಪ ಸಿಂಗ್ ಸಿಧು ಯಾನೆ ಸಿಧು ಮೂಸೆವಾಲಾರ ಹತ್ಯೆಗೈದಿದ್ದ ಪ್ರಮುಖ ಶೂಟರ್ ಓರ್ವ ಸೇರಿದ್ದಾನೆ.
ಅಂಕಿತ ಸಿರ್ಸಾ ಮೂಸೆವಾಲಾಗೆ ಗುಂಡಿಕ್ಕಿದ್ದ ಶಾರ್ಪ್ ಶೂಟರ್ಗಳಲ್ಲಿ ಓರ್ವನಾಗಿದ್ದು,ಸಚಿನ್ ಭಿವಾನಿ ಮೂಸೆವಾಲಾ ಪ್ರಕರಣದ ನಾಲ್ವರು ಶೂಟರ್ಗಳಿಗೆ ಆಶ್ರಯ ಒದಗಿಸಿದ್ದ. ಇಬ್ಬರನ್ನೂ ದಿಲ್ಲಿಯ ಕಾಶ್ಮೀರಿ ಗೇಟ್ ಬಸ್ನಿಲ್ದಾಣದಿಂದ ಬಂಧಿಸಲಾಗಿದೆ ಎಂದು ದಿಲ್ಲಿ ಪೊಲೀಸ್ ವಿಶೇಷ ಘಟಕದ ಸ್ಪೆಷಲ್ ಪೊಲೀಸ್ ಕಮಿಷನರ್ ಹರಗೋಬಿಂದರ್ ಸಿಂಗ್ ಧಾಲಿವಾಲ್ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹರ್ಯಾಣದ ಸೋನೆಪತ್ ನಿವಾಸಿಯಾಗಿರುವ ಅಂಕಿತ್ ರಾಜಸ್ಥಾನದಲ್ಲಿ ಕೊಲೆಯತ್ನದ ಇತರ ಎರಡು ಪ್ರಕರಣಗಳಲ್ಲಿಯೂ ಆರೋಪಿಯಾಗಿದ್ದಾನೆ. ಈತ ಶೂಟರ್ಗಳ ಪೈಕಿ ಅತ್ಯಂತ ಕಿರಿಯನೂ ಆಗಿದ್ದಾನೆ.
ಭಿವಾನಿ ಕೂಡ ರಾಜಸ್ಥಾನದ ಚರ್ಚೊಂದರಲ್ಲಿಯ ‘ಹೇಯ ಪ್ರಕರಣ’ದ ಆರೋಪಿಯಾಗಿದ್ದು, ಈತ ಶೂಟರ್ಗಳಿಗೆ ಆಶ್ರಯ ಮತ್ತು ನೆರವನ್ನು ಒದಗಿಸಿದ್ದ.
ಭಿವಾನಿ ರಾಜಸ್ಥಾನದಲ್ಲಿ ಬಿಷ್ಣೋಯಿ ಗ್ಯಾಂಗಿನ ಎಲ್ಲ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದ ಮುಖ್ಯವ್ಯಕ್ತಿಯಾಗಿದ್ದ ಎಂದು ಪೊಲೀಸರು ತಿಳಿಸಿದರು.
ಪೊಲೀಸರು ಬಂಧಿತರಿಂದ ಎರಡು ಪಿಸ್ತೂಲುಗಳು ಮತ್ತು 19 ಸಜೀವ ಗುಂಡುಗಳು,ಪಂಜಾಬ ಪೊಲೀಸರ ಮೂರು ಸಮವಸ್ತ್ರಗಳು,ಎರಡು ಮೊಬೈಲ್ ಪೋನ್ಗಳು,ಒಂದು ಡೊಂಗಲ್ ಮತ್ತು ಒಂದು ಸಿಮ್ ವಶಪಡಿಸಿಕೊಂಡಿದ್ದಾರೆ.
ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಪೊಲೀಸರು ಕಳೆದ ತಿಂಗಳು ಗುಜರಾತಿನ ಕಛ್ನಿಂದ ಪ್ರಿಯವೃತ ಅಲಿಯಾಸ್ ಫೌಜಿ,ಕಶಿಷ್ ಮತ್ತು ಕೇಶವ ಕುಮಾರ ಎನ್ನುವವರನ್ನು ಬಂಧಿಸಿ,ಗ್ರೆನೇಡ್ಗಳು,ಇಲೆಕ್ಟ್ರಿಕ್ ಡಿಟೊನೇಟರ್ಗಳು,ಅಸಾಲ್ಟ್ ರೈಫಲ್ ಮತ್ತು ಪಿಸ್ತೂಲುಗಳನ್ನು ವಶಪಡಿಸಿಕೊಂಡಿದ್ದರು.
ಮೇ 29ರಂದು ಮೂಸೆವಾಲಾ ಹತ್ಯೆ ನಡೆದಿತ್ತು.







