ರಾಜಕೀಯದಿಂದ ದೂರವಿರಿ: ಪಾಕ್ ಸೇನಾಧಿಕಾರಿಗಳಿಗೆ ಸೂಚನೆ
ಇಸ್ಲಮಾಬಾದ್, ಜು.4: ರಾಜಕೀಯದಿಂದ ದೂರ ಇರುವಂತೆ ಮಿಲಿಟರಿ, ಗುಪ್ತಚರ ಅಧಿಕಾರಿಗಳಿಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೆದ್ ಬಾಜ್ವಾ ನಿರ್ದೇಶಿಸಿದ್ದಾರೆ ಎಂದು ವರದಿಯಾಗಿದೆ.
ಪಂಜಾಬ್ ಪ್ರಾಂತದಲ್ಲಿ ನಡೆಯಲಿರುವ ಮುಂಬರುವ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಲು ಪಾಕಿಸ್ತಾನದ ರಕ್ಷಣಾ ಪಡೆ ಹಾಗೂ ಗುಪ್ತಚರ ಇಲಾಖೆಯ ಕೆಲ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಪದಚ್ಯುತ ಪ್ರಧಾನಿ ಇಮ್ರಾನ್ಖಾನ್ ಪಕ್ಷ ಆರೋಪಿಸಿರುವ ಹಿನ್ನೆಲೆಯಲ್ಲಿ ಪಾಕ್ ಸೇನಾ ಮುಖ್ಯಸ್ಥರು ಈ ಸೂಚನೆ ಜಾರಿಗೊಳಿಸಿದ್ದಾರೆ ಎಂದು ಮಾಧ್ಯಮಗಳು ಸೋಮವಾರ ವರದಿ ಮಾಡಿವೆ. ರಾಜಕೀಯಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಮತ್ತು ಭವಿಷ್ಯದಲ್ಲಿಯೂ ರಾಜಕೀಯದಿಂದ ದೂರ ಇರುವುದಾಗಿ ಪಾಕಿಸ್ತಾನದ ಸೇನೆ ಈ ಹಿಂದೆಯೂ ಹೇಳಿತ್ತು.
ರಾಜಕೀಯದಿಂದ ದೂರ ಇರುವಂತೆ ಮತ್ತು ರಾಜಕಾರಣಿಗಳೊಂದಿಗೆ ಸಂಪರ್ಕ ಸಾಧಿಸದಂತೆ ರಕ್ಷಣಾ ಪಡೆಯ ಎಲ್ಲಾ ಪ್ರಮುಖ ಅಧಿಕಾರಿಗಳಿಗೆ ಹಾಗೂ ಐಎಸ್ಐ ಅಧಿಕಾರಿಗಳಿಗೆ ಜನರಲ್ ಬಾಜ್ವಾ ಮತ್ತೊಮ್ಮೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಐಎಸ್ಐನ ಲಾಹೋರ್ ಸೆಕ್ಟರ್ ಕಮಾಂಡರ್ ಬ್ರಿಗೇಡಿಯರ್ ರಶೀದ್, ಪಂಜಾಬ್ ಉಪಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂದು ಇಮ್ರಾನ್ಖಾನ್ ಅವರ ಪಿಟಿಐ ಪಕ್ಷ ಆರೋಪಿಸಿತ್ತು.
ಪಕ್ಷದ ಅಭ್ಯರ್ಥಿಗಳಿಗೆ ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಇಮ್ರಾನ್ಖಾನ್ ಹೇಳಿದ್ದರು. ಅದರೆ ರಶೀದ್ ಅವರು ಲಾಹೋರ್ನಲ್ಲಿಲ್ಲ, ಅವರು ಕರ್ತವ್ಯದ ಮೇರೆಗೆ ಇಸ್ಲಮಾಬಾದ್ನಲ್ಲಿ ಇದ್ದಾರೆ, ಮತ್ತು ಈ ಆರೋಪ ಸುಳ್ಳು ಎಂದು ರಕ್ಷಣಾ ಪಡೆಯ ಮೂಲಗಳು ಸ್ಪಷ್ಟಪಡಿಸಿವೆ.
ಪಂಜಾಬ್ ವಿಧಾನಸಭೆಯಲ್ಲಿ ಕಾಲಿ ಇರುವ 20 ಸ್ಥಾನಗಳಿಗೆ ಜುಲೈ 17ರಂದು ಉಪಚುನಾವಣೆ ನಡೆಯಲಿದೆ. ಪಾಕಿಸ್ತಾನದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿರುವ ಸೇನೆಯು ರಾಜಕೀಯದಲ್ಲೂ ಸಕ್ರಿಯವಾಗಿದ್ದು ಭದ್ರತೆ ಮತ್ತು ವಿದೇಶಾಂಗ ನೀತಿಯ ವಿಷಯಗಳಲ್ಲಿ ಇದುವರೆಗೆ ಗಣನೀಯ ಅಧಿಕಾರವನ್ನು ಹೊಂದಿದೆ.