ಮೈಸೂರು: ಫರೂಖಿಯಾ ಬಾಲಕಿಯರ ಖಾಸಗಿ ಪ್ರೌಢಶಾಲೆಗೆ ಶಿಕ್ಷಣ ಇಲಾಖೆಯಿಂದ ಬೀಗ
ಶಿಕ್ಷಣ ಇಲಾಖೆಯ ಕ್ರಮ ಖಂಡಿಸಿ ವಿದ್ಯಾರ್ಥಿನಿಯರಿಂದ ಪ್ರತಿಭಟನೆ

ಮೈಸೂರು,ಜು.4: ನಗರದ ಲಷ್ಕರ್ ಮೊಹಲ್ಲಾದಲ್ಲಿರುವ ಫರೂಖಿಯಾ ಬಾಲಕಿಯರ ಖಾಸಗಿ ಪ್ರೌಢಶಾಲೆಗೆ ಯಾವುದೇ ಸೂಚನೆ ನೀಡದೆ ಧಿಡೀರನೆ ಶಿಕ್ಷಣ ಇಲಾಖೆ ಸೀಲ್ ಮಾಡಿ ಬಂದ್ ಮಾಡಿದೆ ಎಂದು ಆರೋಪಿಸಿ ಸುಮಾರು 400 ಕ್ಕೂ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ.
ನಗರದ ಪೈಲಟ್ ಸರ್ಕಲ್ ಬಳಿ ಇರುವ ಫರೂಖಿಯಾ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಈ ಘಟನೆ ನಡೆದ್ದಿದ್ದು, ಎಂದಿನಂತೆ ಶಾಲೆಗೆ ಬಂದ ವಿದ್ಯಾರ್ಥಿನಿಯರಿಗೆ ಶಾಲೆ ಗೇಟ್ ಬಂದ್ ಮಾಡಿ ಸೀಲ್ ಹಾಕಿರುವುದು ದಿಗ್ಬ್ರಮೆ ಉಂಟು ಮಾಡಿದೆ.
ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯರು ನಮ್ಮ ಹಕ್ಕು ನಮ್ಮ ಶಾಲೆ ಎಂಬ ಘೋಷಣೆಯೊಂದಿಗೆ ಶಾಲೆಯ ಮುಂಭಾಗ ಪ್ರತಿಭಟನೆಗೆ ಇಳಿದರು. ಇವರ ಜೊತೆಗೆ ಪೋಷಕರು, ಆಮ್ ಆದ್ಮಿ, ಎಸ್.ಡಿ.ಪಿ.ಐ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ವಿವಿಧ ಸಂಘಟನೆಗಳವರು ಜೊತೆಗೂಡಿ ಪ್ರತಿಭಟನೆ ನಡೆಸಿದರು.
ಇದೇ ವೇಳೆ ವಿದ್ಯಾರ್ಥಿನಿಯೊಬ್ಬಳು ಮಾತನಾಡಿ, ನಮ್ಮ ಶಾಲೆ ನಮ್ಮ ಹಕ್ಕು, ಹೀಗೆ ಏಕಾ ಏಕಿ ಶಾಲೆಯನ್ನು ಬಂದ್ ಮಾಡಿದರೆ ನಾವು ಎಲ್ಲಿಗೆ ಹೋಗಬೇಕು, ಪ್ರಧಾನಿ ನರೇಂದ್ರ ಮೋದಿ ಅವರು ಬೇಟಿ ಪಡಾವೋ ಭೇಟಿ ಬಚಾವೋ ಎಂದು ಹೇಳುತ್ತಾರೆ. ಇದೇನಾ ಅದು ಎಂದು ಪ್ರಶ್ನಿಸಿದರು.
ನಾವು ವಿದ್ಯೆ ಕಲಿಯಲು ಬಂದಿದ್ದೇವೆ, ನಮಗೆ ರಾಜಕೀಯ ಗೊತ್ತಿಲ್ಲ,ಆದರೆ ಕೆಲವು ರಾಜಕೀಯದಿಂದ ಮುಸ್ಲಿಮ್ ಸಮುದಾಯಕ್ಕೆ ಸೇರಿದೆ ಶಾಲೆಯನ್ನು ಮುಚ್ಚಿಸಿದ್ದಾರೆ. ನಾವು ಎಲ್ಲಿಗೆ ಹೋಗಬೇಕು? ನಮ್ಮ ತಂದೆ ತಾಯಿಗಳು ಈ ಶಾಲೆಯನ್ನೇ ನಂಬಿ ನಮ್ಮನ್ನು ದಾಖಲು ಮಾಡಿದ್ದಾರೆ. ನಾವು ಈ ಶಾಲೆಯಲ್ಲಿ ವಿದ್ಯೆ ಕಲಿಯಲು ಹೊಂದುಕೊಂಡಿದ್ದೇವೆ. ಈಗ ಬೇರೆ ಶಾಲೆಗೆ ನಮ್ಮನ್ನು ಕಳುಹಿಸಿದರೆ ನಾವು ಅಲ್ಲಿ ಬೇರೆ ವಿದ್ಯಾರ್ಥಿನಿಯರೊಂದಿಗೆ
ಹೊಂದಿಕೊಳ್ಳಲು ಸಾಧ್ಯವೇ? ಅವರು ನಮ್ಮ ಜೊತೆ ಹೊಂದಿಕೊಳ್ಳುತ್ತಾರೆಯೇ? ಜಿಲ್ಲಾಡಳಿತ ಮತ್ತು ಸರ್ಕಾರ ನಮಗೆ ನ್ಯಾಯ ಕೊಡಿಸಿ ಈ ವರ್ಷ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಘಟನೆ ವಿವರ: ಸರ್ಕಾರಿ ಕಟ್ಟಡ ಹಾಗೂ ಖಾಲಿ ಜಾಗದಲ್ಲಿ ಫಾರೂಕಿಯಾ ಸಂಸ್ಥೆ ಶಿಕ್ಷಣಕ್ಕಾಗಿ 1992 ರಲ್ಲಿ 50 ವರ್ಷದ ಲೀಸ್ ಗೆ ಪಡೆದಿತ್ತು. ಈ ಸಂಸ್ಥೆಗೆ ಲೀಸ್ ನೀಡಿರುವ ಸಂಬಂಧ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆಹೋಗಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ನಡೆದ ನಂತರ 2008 ರಲ್ಲಿ ಸರ್ಕಾರದ ತೀರ್ಮಾನ ಅಂತಿಮ ಎಂಬ ಆದೇಶ ಹೊರಬಿದ್ದಿತ್ತು. ಆದರೆ ಇಲ್ಲಿವರೆಗೂ ಸರ್ಕಾರ ಶಾಲೆಯನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಮೇಯಕ್ಕೆ ಹೋಗಿರಲಿಲ್ಲ, ಏಪ್ರಿಲ್ ತಿಂಗಳಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಯನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಆದರೆ ಆಡಳಿತ ಮಂಡಳಿ ಕಾಲಾವಕಾಶ ನೀಡಯವಂತೆ ಕೇಳಿಕೊಂಡಿದೆ. ಇದಕ್ಕೆ ಸ್ಪಂಧಿಸಿದ ಅಧಿಕಾರಿಗಳು ಸುಮ್ಮನಾಗಿದ್ದಾರೆ. ನಂತರ ಜೂನ್ ನಲ್ಲಿ ಶಾಲೆ ತೆರವುಗೊಳಿಸುವಂತೆ ಒತ್ತಾಯಿಸಿ ನೋಟಿಸ್ ನೀಡಿದ್ದಾರೆ. ಆಡಳಿತ ಮಂಡಳಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿ ಜೂ.30 ರಂದು ತಾತ್ಕಾಲಿಕ ತಡೆಯನ್ನು ತಂದಿದೆ.
ಆದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಜುಲೈ 2 ರ ಶನಿವಾರ ಶಾಲೆ ಮುಗಿದ ನಂತರ ಪೊಲೀಸ್ ಬಂದೂಬಸ್ತ್ ನಲ್ಲಿ ತೆರಳಿ ಶಾಲೆಗೆ ಬೀಗ ಜಡಿದು ಸೀಲ್ ಮಾಡಿದೆ ಎಂದು ಆಡಳಿತ ಮಂಡಳಿ ನಿರ್ದೇಶಕ ನಬೀಲ್ ಮೊಹಮದ್ ಖಾನ್ ತಿಳಿಸಿದರು.
ಇದಕ್ಕೂ ಮೊದಲು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಕೋರ್ಟ್ ಆದೇಶದ ಪ್ರತಿ ನೀಡಿ ಶಿಕ್ಷಣ ಇಲಾಖೆ ಕ್ರಮದ ಬಗ್ಗೆ ವಿವರಿಸಲಾಯಿತು. ಇದಕ್ಕೆ ಸ್ಪಂಧಿಸಿದ ಜಿಲ್ಲಾದಿಕಾರಿ ಡಾ.ಬಗಾದಿ ಗೌತಮ್ ಇನ್ನೆರಡು ದಿನಗಳ ಕಾಲಾವಕಾಶ ನೀಡಿ ನಂತರ ಸಮಸ್ಯೆಯನ್ನು ಬಗೆಹರಿಸಲಾಗುವುದು. ಇದಕ್ಕೆ ಸಂಬಂಧ ಪಟ್ಟಂತೆ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಶಿಕ್ಷಣ ಇಲಾಖೆ ಆಯುಕ್ತರ ಸೂಚನೆ ಮೇರೆಗೆ ಶಾಲೆಯನ್ನು ಸೀಲ್ ಮಾಡಿದ್ದೇವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಬದಲಿ ವ್ಯವಸ್ಥೆ ಮಾಡಲು ಶಿಕ್ಷಣ ಇಲಾಖೆ ಸಿದ್ಧವಾಗಿದೆ. ಶಾಲಾ ಆಡಳಿತ ಮಂಡಳಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವ ವಿಚಾರ ನಮಗೆ ತಿಳಿದಿಲ್ಲ, ಹಿರಿಯ ಅಧಿಕಾರಿಗಳ ಮುಂದಿನ ಆದೇಶದಂತೆ ಕ್ರಮ ವಹಿಸಲಾಗುವುದು.
-ಕೃಷ್ಣ, ಬಿಇಓ, ಉತ್ತರ ವಲಯ.







