ಗಂಭೀರ ಅನಾರೋಗ್ಯದ ಕಾರಣ ರಾಜೀನಾಮೆ ನೀಡುತ್ತಾರೆಂಬ ವದಂತಿಯನ್ನು ನಿರಾಕರಿಸಿದ ಪೋಪ್ ಫ್ರಾನ್ಸಿಸ್
ವೆಟಿಕನ್, ಜು.4: ತಾನು ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದು ರಾಜೀನಾಮೆ ನೀಡಲು ಸಿದ್ಧತೆ ನಡೆಸುತ್ತಿರುವುದಾಗಿ ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಕೇವಲ ಗಾಳಿ ಸುದ್ಧಿಯಾಗಿದೆ ಎಂದು ಪೋಪ್ ಫ್ರಾನ್ಸಿಸ್ ತಳ್ಳಿಹಾಕಿದ್ದಾರೆ.
ಇಂತಹ ಯೋಚನೆ ತನ್ನ ಮನದಲ್ಲಿ ಬಂದಿಲ್ಲ ಎಂದು ‘ರಾಯ್ಟರ್ಸ್’ ಸುದ್ಧಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ. ಆದರೆ, ಒಂದು ವೇಳೆ ಚರ್ಚ್ನ ಆಡಳಿತ ನಿರ್ವಹಿಸಲು ತನ್ನ ಆರೋಗ್ಯ ಅನುಮತಿ ನಿರಾಕರಿಸಿದರೆ ಆಗ ರಾಜೀನಾಮೆಯ ಬಗ್ಗೆ ಚಿಂತಿಸಬಹುದು ಎಂದು ಪೋಪ್ ಹೇಳಿದ್ದಾರೆ.
ಅದು ಯಾವಾಗ ಆಗಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ 85 ವರ್ಷದ ಪೋಪ್, ನಮಗೆ ತಿಳಿದಿಲ್ಲ. ದೇವರೇ ಹೇಳುತ್ತಾರೆ ಎಂದರು. ಮೊಣಕಾಲಿನ ಸಣ್ಣ ಮುರಿತಕ್ಕೆ ಒಳಗಾಗಿದ್ದು ಅದಕ್ಕೆ ಲೇಸರ್ ಚಿಕಿತ್ಸೆ ಒದಗಿಸಲಾಗಿದೆ.
ಮೊಣಕಾಲಿನ ನೋವಿನ ಕಾರಣ ಆಫ್ರಿಕಾ ಪ್ರವಾಸವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ್ದೇನೆ ಎಂದ ಅವರು, 2021ರಲ್ಲಿ ಶಸ್ತ್ರಚಿಕಿತ್ಸೆ ನಡೆದ ಸಂದರ್ಭ ತನಗೆ ಹೊಟ್ಟೆಯ ಕ್ಯಾನ್ಸರ್ ಇರುವುದು ಗೊತ್ತಾಗಿದೆ ಎಂಬ ವರದಿ ಕೇವಲ ಗಾಳಿಸುದ್ಧಿ ಎಂದು ಹೇಳಿದರು.





