ಚೀನಾ: ಕೊರೋನ ಸೋಂಕು ಮತ್ತೆ ಹೆಚ್ಚಳ; ಅನ್ಹೂಯಿ ಪ್ರಾಂತದಲ್ಲಿ ಲಾಕ್ಡೌನ್ ಜಾರಿ

ಬೀಜಿಂಗ್, ಜು.4: ಚೀನಾದಲ್ಲಿ ಸೋಮವಾರ ಮತ್ತೆ ಕೋವಿಡ್ ಸೋಂಕಿನ ಪ್ರಕರಣ ಹೆಚ್ಚಿದ್ದು ಒಂದೇ ದಿನ 300ಕ್ಕೂ ಅಧಿಕ ಹೊಸ ಸೋಂಕು ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಅನ್ಹೂಯಿ ಪ್ರಾಂತದಲ್ಲಿ ಲಾಕ್ಡೌನ್ ಘೋಷಿಸಲಾಗಿದೆ ಎಂದು ವರದಿಯಾಗಿದೆ.
ಶೂನ್ಯ ಕೋವಿಡ್ ನೀತಿಗೆ ಬದ್ಧವಾಗಿರುವ ಚೀನಾದಲ್ಲಿ ಸೋಂಕು ಪರೀಕ್ಷೆ, ಸಂಪರ್ಕ ಪರೀಕ್ಷೆ ಮತ್ತು ಸೋಂಕಿತರನ್ನು ಪ್ರತ್ಯೇಕವಾಗಿರಿಸುವ ಕಟ್ಟುನಿಟ್ಟಿನ ಅಭಿಯಾನ ಜಾರಿಯಲ್ಲಿದೆ. ಶಾಂಘೈ ನಗರದಲ್ಲಿ ಹಲವು ತಿಂಗಳಿಂದ ಜಾರಿಯಲ್ಲಿದ್ದ ಲಾಕ್ಡೌನ್ ತೆರವು ಹಾಗೂ ರಾಜಧಾನಿ ಬೀಜಿಂಗ್ನಲ್ಲಿ ಜಾರಿಯಲ್ಲಿದ್ದ ಕಟ್ಟುನಿಟ್ಟಿನ ನಿರ್ಬಂಧ ಕ್ರಮಗಳನ್ನು ಸಡಿಲಿಸಿದ ಬಳಿಕ ಆರ್ಥಿಕ ಚಟುವಟಿಕೆಗಳು ಗರಿಗೆದರಿದ್ದವು.
ಆದರೆ, ಇದೀಗ ಅನ್ಹುಯಿ ಪ್ರಾಂತದಲ್ಲಿ ಸೋಂಕು ಪ್ರಕರಣ ಉಲ್ಬಣಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಸೋಮವಾರ 287 ಹೊಸ ಸೋಂಕು ಪ್ರಕರಣ ವರದಿಯಾಗಿದ್ದು ಇಲ್ಲಿನ ಸಿಕ್ಸಿಯನ್ ಮತ್ತು ಲಿಂಗ್ಬಿ ನಗರಗಳಲ್ಲಿ 1.7 ಮಿಲಿಯನ್ಗೂ ಅಧಿಕ ಜನರು ಲಾಕ್ಡೌನ್ ವ್ಯಾಪ್ತಿಯಲ್ಲಿದ್ದಾರೆ. ಸೋಂಕು ಪರೀಕ್ಷೆ ನಡೆಸಿದವರು ಮಾತ್ರ ಮನೆಯಿಂದ ಹೊರತೆರಳಲು ಅನುಮತಿ ನೀಡಲಾಗುತ್ತಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.
ಸಿಕ್ಸಿಯಾನ್ ನಗರದಲ್ಲಿ ಜನತೆ 6ನೇ ಸುತ್ತಿನ ಸಾಮೂಹಿಕ ಸೋಂಕು ಪರೀಕ್ಷೆಗೆ ಸರತಿ ಸಾಲಿನಲ್ಲಿ ನಿಂತಿರುವ ಫೋಟೊವನ್ನು ಮಾಧ್ಯಮಗಳು ಪ್ರಕಟಿಸಿವೆ. ಒಂದು ಕ್ಷಣವನ್ನೂ ವ್ಯರ್ಥ ಮಾಡದೆ, ತ್ವರಿತ ಸೋಂಕು ಪರೀಕ್ಷೆಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವಂತೆ ಪ್ರಾಂತೀಯ ಗವರ್ನರ್ ವಾಂಗ್ ಖ್ವಿಂಗ್ಕ್ಸಿಯಾನ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಪಕ್ಕದ ಜಿಯಾಂಗ್ಸು ಪ್ರಾಂತದಲ್ಲೂ ಸೋಮವಾರ 56 ಹೊಸ ಸೋಂಕು ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.