ಬಜ್ಪೆ; ಅದ್ಯಪಾಡಿಗೆ ಸಂಚರಿಸುವ ರಸ್ತೆಗೆ ಗುಡ್ಡ ಕುಸಿತ
ವಾಹನ ಸಂಚಾರ ನಿಷೇಧ

ಬಜ್ಪೆ, ಜು. 4: ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಅದ್ಯಪಾಡಿಗೆ ಸಂಚರಿಸುವ ಜಿಲ್ಲಾ ರಸ್ತೆಯಲ್ಲಿ ಗುಡ್ಡ ಕುಸಿಯುತ್ತಿದ್ದು, ರಸ್ತೆ ಬಂದ್ ಮಾಡಲಾಗಿದೆ.
ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅದ್ಯಪಾಡಿ ಚರ್ಚ್ ಬಳಿಯ ಗುಡ್ಡ ಶುಕ್ರವಾರದಿಂದ ಕುಸಿಯುತ್ತಿದೆ. ಆದರೆ, ಕಂದಾವರ ಗ್ರಾಮ ಪಂಚಾಯತ್ ಯಾವುದೇ ಕ್ರಮಕ್ಕೆ ಮುಂದಾಗದೇ ನಿರ್ಲಕ್ಷ್ಯ ವಹಿಸಿದೆ. ಇದರಿಂದಾಗಿ ಗುಡ್ಡ ಕುಸಿತ ಮುಂದುವರಿದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ನಾಗರೀಕರು ಗ್ರಾಮ ಪಂಚಾಯತ್ ಮತ್ತು ಲೋಕೋಪಯೋಗಿ ಇಲಾಖೆಯನ್ನು ತರಾಟೆಗೆ ತೆಗೆದುಕೊಂದು ಇಲ್ಲಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟ ಪರಿಣಾಮ ಎಚ್ಚೆತ್ತುಕೊಂಡ ಲೋಕೋಪ ಯೋಗಿ ಇಲಾಖೆ ರಸ್ತೆಗೆ ಬ್ಯಾರಿಕೆಟ್ ಹಾಕಿ ರಸ್ತೆಯ ಎರಡೂ ಬದಿಗಳನ್ನು ಮುಚ್ಚಿದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಸೂಚನಾ ಬ್ಯಾನರ್ ನ್ನು ಅಳವಡಿಸಿದ್ದು, ಮರವೂರು – ಅದ್ಯಪಾಡಿ – ಉಣಿಲೆ – ಕಂದಾವರ (ಕೆಂಜಾರಿನಿಂದ ಕೈಕಂಬ ರಸ್ತೆ) ಜಿಲ್ಲಾ ಮುಖ್ಯ ರಸ್ತೆ ಕಿ.ಮೀ 4.20 ರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಿಂದ ಗುಡ್ಡ ಜರಿದಿದೆ. ಹಾಗೂ ಇನ್ನೂ ಜರಿಯುವ ಸಂಭವ ವಿರುವುದರಿಂದ ತಾತ್ಕಾಕವಾಗಿ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಬದಲಿ ಮಾರ್ಗದಲ್ಲಿ ಸಂಚರಿಸಿ ಸಹಕರಿಸಬೇಕೆಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.











