ಎರಡು ತಿಂಗಳ ನಂತರ ನನ್ನ ಮುಂದಿನ ರಾಜಕೀಯ ತೀರ್ಮಾನ: ಶಾಸಕ ಜಿ.ಟಿ.ದೇವೇಗೌಡ

ಮೈಸೂರು,ಜು.4: ಎರಡು ತಿಂಗಳ ನಂತರ ನನ್ನ ಮುಂದಿನ ರಾಜಕೀಯ ತೀರ್ಮಾನ ಮಾಡುತ್ತೇನೆ ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಜಿಟಿ ದೇವೇಗೌಡ, ಎರಡು ತಿಂಗಳ ನಂತರ ಕ್ಷೇತ್ರದ ಜನರ ಸಭೆ ಕರೆಯುತ್ತೇನೆ. ಸಭೆಯಲ್ಲಿ ಮುಕ್ತ ಚರ್ಚೆ ಮಾಡುತ್ತೇನೆ. ಜನರ ಅಭಿಪ್ರಾಯದಂತೆ ನನ್ನ ನಿರ್ಧಾರ ಪ್ರಕಟಿಸುತ್ತೇನೆ. ಇದರಲ್ಲಿ ಯಾವ ಗೊಂದಲಗಳು ಇಲ್ಲ. ಐದು ವರ್ಷ ನಾನು ಜೆಡಿಎಸ್ ಶಾಸಕನಾಗಿ ಜನ ಮತ ಹಾಕಿದ್ದಾರೆ. ಹೀಗಾಗಿ ಯಾವುದೇ ಚುನಾವಣೆಯಲ್ಲಿ ಪಕ್ಷ ವಿಪ್ ಕೊಡಲಿ ಬಿಡಲಿ, ನಾನು ಜೆಡಿಎಸ್ ಪರವಾಗಿ ಮತ ಹಾಕುತ್ತೇನೆ. ಯಾಕೆಂದರೆ ನನ್ನ ಆತ್ಮಸಾಕ್ಷಿ ಗೆ ದ್ರೋಹ ಬಗೆಯುವ ಕೆಲಸ ಯಾವತ್ತೂ ಮಾಡುವುದಿಲ್ಲ. ಕಳೆದ ಮೂರು ವರ್ಷಗಳಿಂದ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಿಲ್ಲ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ಅಡ್ವಾನ್ಸ್ ಆಗಿ ವಿಶ್ ಮಾಡಿದ ಶಾಸಕ ಜಿಟಿ ದೇವೇಗೌಡ, ಸಿದ್ದರಾಮೋತ್ಸವ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಇದುವರೆಗೂ ಆಹ್ವಾನ ಪತ್ರಿಕೆ ಬಂದಿಲ್ಲ. ಆಹ್ವಾನ ಪತ್ರಿಕೆ ಬರಲಿ ಬಿಡಲಿ ನಾನು ಸಿದ್ದರಾಮಯ್ಯ ಅವರಿಗೆ ಆರೈಸುತ್ತೇನೆ. ಸ್ವಲ್ಪದಿನ ಮುಂಚಿತವಾಗಿಯೇ ನಾನು ಅವರಿಗೆ ಹುಟ್ಟುಹಬ್ಬದ ಶುಭ ಕೋರುತ್ತೇನೆ ಎಂದಿದ್ದಾರೆ.





