ನಾಟಕ ಪ್ರದರ್ಶನಕ್ಕೆ ಸಂಘ ಪರಿವಾರದ ಅಡ್ಡಿ; ವಿಪಕ್ಷ ನಾಯಕ ಸಿದ್ದರಾಮಯ್ಯ ಸಹಿತ ಗಣ್ಯರಿಂದ ವ್ಯಾಪಕ ಆಕ್ರೋಶ

ಬೆಂಗಳೂರು, ಜು. 4: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿಯಲ್ಲಿ ಏರ್ಪಡಿಸಿದ್ದ ಮುಸ್ಲಿಂ ಕಥಾ ಹಂದರ ಹೊಂದಿದ ‘ಜತೆಗಿರುವನು ಚಂದಿರ' ನಾಟಕ ಪ್ರದರ್ಶನಕ್ಕೆ ಆರೆಸೆಸ್ಸ್, ಸಂಘ ಪರಿವಾರ ಸಂಘಟನೆಗಳು ಅಡ್ಡಿಪಡಿಸಿರುವುದಕ್ಕೆ ರಂಗಕರ್ಮಿ ಡಾ. ವಿಜಯಮ್ಮ, ನಟರಾಜ್ ಹೊನ್ನವಳ್ಳಿ, ಆರ್. ರಘುನಂದನ್, ಬಿ.ಸುರೇಶ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಮುಖಂಡರು ಹಾಗೂ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸರಣಿ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ಕನ್ನಡ ನಾಟಕ 'ಜತೆಗಿರುವನು ಚಂದಿರ' ಪ್ರದರ್ಶನಕ್ಕೆ ಆರೆಸೆಸ್ಸ್ ಅಡ್ಡಿಪಡಿಸಿರುವುದು ಸಾಂಸ್ಕೃತಿಕ ಭಯೋತ್ಪಾದನೆಯಲ್ಲದೆ ಮತ್ತೇನಲ್ಲ. ಈ ಗೂಂಡಾಗಿರಿಯಲ್ಲಿ ಪಾಲುದಾರರಾದ ಎಲ್ಲ ದುಷ್ಕರ್ಮಿಗಳನ್ನು ಸರಕಾರ ಈ ಕೂಡಲೇ ಬಂಧಿಸಿ, ಕಾನೂನು ಕ್ರಮಕೈಗೊಳ್ಳಬೇಕು' ಎಂದು ಆಗ್ರಹಿಸಿದ್ದಾರೆ.
‘ಸತ್ಯ, ನ್ಯಾಯ ಮತ್ತು ನಿಜವಾದ ಧರ್ಮದ ಪರವಾಗಿರುವ ಸಾಹಿತ್ಯ, ನಾಟಕ ಕಲೆ ಮೊದಲಾದ ಸಾಂಸ್ಕøತಿಕ ಅಭಿವ್ಯಕ್ತಿಗಳನ್ನು ಕಂಡರೆ ಆರೆಸೆಸ್ಸ್ ಮತ್ತು ಸಂಘ ಪರಿವಾರಕ್ಕೆ ಭಯ. ಈ ದಾಳಿಗೂ ಇದೇ ಕಾರಣ. ಇಂತಹ ಅಡ್ಡಿ-ಆತಂಕಗಳನ್ನು ಎದುರಿಸುವ ಚೈತನ್ಯ ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ಇದೆ' ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
ಖಂಡನೆ: ಲೇಖಕ ಜಯಂತ ಕಾಯ್ಕಿಣಿಯವರ ‘ಜತೆಗಿರುವನು ಚಂದಿರ' ನಾಟಕ ಕೋಮು ಸಾಮರಸ್ಯ ಮತ್ತು ದೇಶದ ಐಕ್ಯತೆಯನ್ನು ಸಾರುವ ನಾಟಕವಿದು. ಇದರಲ್ಲಿ ಮುಸ್ಲಿಂ ಸಮುದಾಯದ ಪಾತ್ರಗಳಿದ್ದವು ಎನ್ನುವುದನ್ನು ಮುಂದೆ ಮಾಡಿ ಆಕ್ಷೇಪಣೆ ಪ್ರದರ್ಶನ ಕ್ಕೆ ತಡೆ ಸರಿಯಲ್ಲ. ದೇಶಾದ್ಯಂತ ಜನಸಮುದಾಯಗಳ ನಡುವೆ ಧರ್ಮ, ಜಾತಿ, ಭಷೆಗಳ ಹೆಸರಿನಲ್ಲಿ ಕ್ಷೋಭೆಯನ್ನುಂಟು ಮಾಡುವ ಕೆಲಸಗಳ ಮುಂದುವರೆದ ಭಾಗ ಇದು' ಎಂದು ಸಮುದಾಯ ಕರ್ನಾಟಕ ಅಧ್ಯಕ್ಷ ಅಚ್ಯುತ್ ಟೀಕಿಸಿದ್ದಾರೆ.
ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಕೋಮುಧ್ರುವೀಕರಣದ ಮೂಲಕ ರಾಜಕೀಯ ಅಧಿಕಾರವನ್ನು ನಿರಂತರಗೊಳಿಸುವ ಹುನ್ನಾರ ಸ್ಪಷ್ಟ. ದ್ವೇಷ ಬಿತ್ತಿ ಜನರ ಐಕ್ಯತೆಯನ್ನು ಛಿದ್ರಗೊಳಿಸುವ ಬದಲು ವಿವೇಕ, ಪ್ರೀತಿ ಮತ್ತು ಪರಸ್ಪರ ವಿಶ್ವಾಸ ಮೂಡಿಸುವ ಮೂಲಕ ಸಮಾಜದಲ್ಲಿ ಒಗ್ಗಟ್ಟನ್ನು ತರುವ ಕೆಲಸ ಇವತ್ತಿನ ತುರ್ತು. ನಾಟಕ ಪ್ರದರ್ಶನಕ್ಕೆ ಅಡ್ಡಿಪಡಿಸಿದ ಸಂವಿಧಾನ ವಿರೋಧಿ ಕೃತ್ಯ ಎಸಗಿದವರ ಮೇಲೆ ಸೂಕ್ತಕ್ರಮ ಕೈಗೊಂಡು ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಪ್ರಗತಿ ನೆಲೆಗೊಳ್ಳುವಂತೆ ಮಾಡಬೇಕು' ಎಂದು ಒತ್ತಾಯಿಸಿದ್ದಾರೆ.
ಅಪಾಯಕಾರಿ: ಹಿಂದೂ-ಮುಸ್ಲಿಮರ ವಿಚಾರಕ್ಕೆ ಸಂಬಂಧಿಸಿದ ‘ಜತೆಗಿರುವನು ಚಂದಿರ’ ನಾಟಕ ನಡೆಯುತ್ತಿದ್ದು, ಇಂದಿನ ಸ್ಥಿತಿಯಲ್ಲಿ ಅದನ್ನು ಪ್ರದರ್ಶನ ಮಾಡುವುದು ಸರಿಯಲ್ಲ. ನೂರಾರು ಜನ ನಾಟಕ ನೋಡಲೆಂದೇ ಸೇರಿರುವ ಒಂದು ಜಾಗದಲ್ಲಿ, ನಾಲ್ಕೈದು ಜನ ಬಂದು ನಾಟಕ ನಿಲ್ಲಿಸಿ ಎಂದಾಗ ಉಳಿದವರ ಸೊಲ್ಲೇಕೆ ಅಡಗುತ್ತದೆ? ಚಂದಿರನಂತೆ ತಣ್ಣಗೆ ಬೆಳಕನೀಯುವ ಗುಣ ಹೊಂದಿದವರು ಅಂತಹ ಸಂದರ್ಭದಲ್ಲಿ ಜೊತೆ ನಿಂತು ನಾವು ಇದು ಮುಂದುವರೆಯುವುದರ ಪರವಾಗಿದ್ದೇವೆಂದೇಕೆ ಹೇಳುವುದಿಲ್ಲ? ಜೊತೆಗೆ ಪೊಲೀಸರೂ ನಾಟಕ ನಿಲ್ಲಿಸಿ ಎಂದು ಅವರೊಂದಿಗೆ ಸೇರಿಕೊಳ್ಳುವುದು ಎಷ್ಟು ಸರಿ? ನಾಟಕ ಜನರಿಗೆ ಬೇಕಾಗಿದ್ದು ತಾನೆ? ಮಾನವಂತರ ಮೌನ ಬಹಳ ಅಪಾಯಕಾರಿಯಾದುದು ಎಂದು ರಂಗ ನಿರ್ದೇಶಕ ಎಸ್. ರಘುನಂದನ್ ಕಿಡಿಕಾರಿದ್ದಾರೆ
ಕ್ರಮ ಜರುಗಿಸಬೇಕು:
‘ದೇಶದಲ್ಲಿ ಹಿಂಸಾತ್ಮಕ ಭಯೋತ್ಪಾದನೆ ನಡೆಸುತ್ತಿದ್ದ ಆರೆಸೆಸ್ಸ್ ಈಗ ಸಾಂಸ್ಕøತಿಕ ಭಯೋತ್ಪಾದನೆಯನ್ನು ಶುರುವಿಟ್ಟುಕೊಂಡಿದೆ. ಪಠ್ಯಪುಸ್ತಕಗಳಿಂದ ಹಿಡಿದು ರಂಗಭೂಮಿವರೆಗೂ ಆ ಭಯೋತ್ಪಾದನೆಯನ್ನು ಸ್ಥಾಪಿಸುತ್ತಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ, ಆನವಟ್ಟಿಯಲ್ಲಿ ನಾಟಕ ಪ್ರದರ್ಶನಕ್ಕೆ ಅಡ್ಡಿಪಡಿಸಿದ ಸಂಘಪರಿವಾದ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು'
-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ಫ್ಯಾಶಿಸ್ಟ್ ಆಳ್ವಿಕೆಯಲ್ಲಿ ಕಲೆ ಕಮರಿಹೋಗುವ ಆತಂಕ:
‘ನಿನ್ನೆ ನಡೆದ ಘಟನೆಯನ್ನು ಗಮನಿಸಿದರೆ ರಂಗಭೂಮಿ ಕಲೆಗೆ ಒಂದು ರೀತಿಯಲ್ಲಿ ಭಯ ಮತ್ತು ಆತಂಕ ಸೃಷ್ಟಿಯಾಗಿದೆ ಎಂಬುದಕ್ಕೆ ಉದಾಹರಣೆ. ಕಲೆಯ ಅಭಿವ್ಯಕ್ತಿಗೆ ಅಡ್ಡಿಪಡಿಸಿರುವುದನ್ನು ನೋಡಿದರೆ ಕಲೆಗೆ ಸವಾಲುಗಳಿವೆ ಎಂಬುದರ ಸಂಕೇತ. ಇದರ ಹಿಂದಿನ ಫ್ಯಾಶಿಸ್ಟ್ ಮನೋಭಾವದವರನ್ನು ಎದುರಿಸಲು ಕಲಾವಿದರ ಸಿದ್ಧರಾಗಬೇಕು. ಭಯ ಸಹಿತ, ಧರ್ಮನಿರಪೇಕ್ಷತೆ ಮತ್ತು ಸತ್ಯಶೋಧನೆ ಮೂಲಕ ಫ್ಯಾಶಿಸ್ಟ್ ಆಳ್ವಿಕೆಯಲ್ಲಿ ಕಲೆ ಮರುಟಿಹೋಗದಂತೆ ಎಚ್ಚರ ವಹಿಸಬೇಕು'
-ನಟರಾಜ್ ಹೊನ್ನವಳ್ಳಿ, ರಂಗನಿರ್ದೇಶಕ
------------
‘ಕ್ಷುಲ್ಲಕ ಕಾರಣಕ್ಕೆ ಜತೆಗಿರುವನು ಚಂದಿರ ನಾಟಕ ಪ್ರದರ್ಶನಕ್ಕೆ ನಾಲ್ಕೈದು ಮಂದಿ ಅಡ್ಡಿಪಡಿಸಿದ್ದನ್ನು ಪ್ರದರ್ಶನ ವೀಕ್ಷಣೆಗೆ ಬಂದಿದ್ದ ಜನತೆ ತಡೆಯಬೇಕಿತ್ತು. ಆದರೆ, ಇದು ಸಮಾಜಕ್ಕೆ ಅತ್ಯಂತ ಆಘಾತಕಾರಿ. ಸಾಂಸ್ಕøತಿಕ ಲೋಕದ ಧ್ವನಿಯನ್ನು ಅಡಗಿಸುವ ಪ್ರಯತ್ನದ ವಿರುದ್ಧ ಕಲಾವಿದರು ಹಾಗೂ ಸಮಾಜ ಜಾಗೃತ ಮತ್ತು ಎಚ್ಚರವಾಗಿರುವುದು ಇಂದಿನ ದಿನಗಳಲ್ಲಿ ಅತ್ಯಂತ ಅಗತ್ಯ'
-ಬಿ.ಸುರೇಶ್, ರಂಗ ನಿರ್ದೇಶಕ
---------------
‘ಜತೆಗಿರುವನು ಚಂದಿರ' ನಾಟಕದಲ್ಲಿ ಶ್ರಮಜೀವಿಗಳ ಬದುಕಿನ ಚಿತ್ರಣವನ್ನು ತೋರಿಸಲಾಗಿದೆ. ಇಂತಹ ನಾಟಕ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದು ಅತ್ಯಂತ ಬೇಸರದ ಸಂಗತಿ. ರಕ್ಷಣೆ ನೀಡಬೇಕಾದ ಪೊಲೀಸರು ನಾಟಕ ನಿಲ್ಲಿಸಿ ಎಂದು ಹೇಳಿರುವುದು ಅವಮಾನಕರ. ರಕ್ಷಣೆ ಕಲ್ಪಿಸಬೇಕಾದ ಪೊಲೀಸರ ಮತ್ತು ಸರಕಾರ ತಟಸ್ಥವಾಗಿದ್ದು ಸರಿಯಲ್ಲ. ಈ ಹಿಂದೆ ಇಂತಹ ಘಟನೆಗಳೇನಾದರೂ ನಡೆದಿದ್ದರೆ ಬೆಂಗಳೂರಿನ ಬೀದಿಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದವು. ಆದರೆ, ಇಂದು ಕೇವಲ ಖಂಡನೆಗೆ ಸೀಮಿತವಾಗಿದೆ. ರಂಗಭೂಮಿ ನಮಗೆ ಪುಕ್ಕಲುತನ, ಸಂಕೋಚವನ್ನು ಕಲಿಸಿಲ್ಲ. ಇದನ್ನು ಎಲ್ಲರೂ ಪ್ರತಿಭಟಿಸಬೇಕು. ಸರಕಾರ ನಾಟಕ ಪ್ರದರ್ಶನಕ್ಕೆ ಸೂಕ್ತ ರಕ್ಷಣೆ ಕಲ್ಪಿಸಬೇಕು'
-ಡಾ. ವಿಜಯಮ್ಮ, ರಂಗಕರ್ಮಿ, ಹಿರಿಯ ಪತ್ರಕರ್ತೆ







