ಸ್ವಾತಂತ್ರ್ಯದಿನದ ಪರೇಡ್‍ನಲ್ಲಿ ಬಂದೂಕುಧಾರಿಯಿಂದ ಗುಂಡು ಹಾರಾಟ: ಆರು ಮಂದಿ ಮೃತ್ಯು

ಚಿಕಾಗೋ: ಉಪನಗರದಲ್ಲಿ ಸೋಮವಾರ ಸ್ವಾತಂತ್ರ್ಯ ದಿನದ ಪರೇಡ್‍ನಲ್ಲಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ ಘಟನೆಯಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದು, 24 ಮಂದಿ ಗಾಯಗೊಂಡಿದ್ದಾರೆ. ಭೀತಿಯಿಂದ ನೂರಾರು ಮಂದಿ ವರ್ತಕರು, ಪೋಷಕರು, ಜನಸಾಮಾನ್ಯರು ಮತ್ತು ಸೈಕಲ್‍ಗಳಲ್ಲಿ ತೆರಳುತ್ತಿದ್ದ ಮಕ್ಕಳು ದಿಕ್ಕಾಪಾಲಾಗಿ ಓಡಿದರು. ಛಾವಣಿಯ ಮೇಲಿನಿಂದ ದಾಳಿ ನಡೆಸಿದ್ದಾಗಿ ತಿಳಿದುಬಂದಿದೆ.
ಹಂತಕನ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದ್ದು, ಜನ ಮನೆಗಳಲ್ಲೇ ಉಳಿಯುವಂತೆ ಹೈಲ್ಯಾಂಡ್ ಪಾರ್ಕ್ ಪೊಲೀಸ್ ಕಮಾಂಡರ್ ಕ್ರಿಸ್ ಓನಿಲ್ ಮನವಿ ಮಾಡಿದ್ದಾರೆ.
ಜುಲೈ ನಾಲ್ಕರ ಘಟನೆ ಅಮೆರಿಕದ ಜನಜೀವನದ ಆಚರಣೆಗಳನ್ನು ಛಿದ್ರಗೊಳಿಸುವ ಇತ್ತೀಚಿನ ಘಟನೆಯಾಗಿದ್ದು, ಶಾಲೆ, ಚರ್ಚ್, ಕಿರಾಣಿ ಅಂಗಡಿಗಳು ಹಾಗೂ ಇದೀಗ ಸಮುದಾಯ ಪರೇಡ್‍ಗಳು ಕೂಡಾ ಹತ್ಯೆಯ ತಾಣಗಳಾಗಿ ಮಾರ್ಪಡುತ್ತಿದೆ. ಈ ಬಾರಿ ದೇಶದ ಸಂಸ್ಥಾಪನೆ ದಿನದ ಸಂಭ್ರಮದ ದಿನವೇ ರಕ್ತಪಾತ ನಡೆದಿದೆ.
ಈ ಘಟನೆ ನಮ್ಮನ್ನು ನಡುಗಿಸಿದೆ ಎಂದು ಮೇಯರ್ ನ್ಯಾನ್ಸಿ ರೊಟೆರಿಂಗ್ ಹೇಳಿದ್ದಾರೆ. ಸಮುದಾಯ ಮತ್ತು ಸ್ವಾತಂತ್ರ್ಯವನ್ನು ಸಂಭ್ರಮಿಸುವ ಬದಲು ಇದೇ ದಿನ ಜನರ ಸಾವಿನ ಶೋಕವನ್ನು ಆಚರಿಸುವಂತಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಪರೇಡನ್ನು ಭಾರಿ ಸಂಖ್ಯೆಯಲ್ಲಿ ಜನ ವೀಕ್ಷಿಸುವ ಸ್ಥಳದಲ್ಲೇ ಈ ದಾಳಿ ನಡೆದಿದೆ. ಹಲವು ಸುತ್ತಿನ ಗುಂಡಿನ ದಾಳಿ ನಡೆದಿದ್ದು, ಹಲವಾರು ಮಂದಿ ರಕ್ತಸಿಕ್ತ ವ್ಯಕ್ತಿಗಳು ಪಲಾಯನ ಮಾಡುವುದು ಕಂಡುಬಂತು. ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತು. ಆಲೂ ಚಿಪ್ಸ್‌ನ ಅರ್ಧ ತಿಂದ ಪ್ಯಾಕೇಟ್, ಚಾಕಲೇಟ್ ಬಾಕ್ಸ್‌ಗಳು ಪಾರ್ಕ್‍ನಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದ ದೃಶ್ಯ ಕಂಡುಬಂತು.







