ಹೊಸ ಸರಕಾರದ ಹಿಂದಿನ ರೂವಾರಿಯ ಹೆಸರು ಬಹಿರಂಗಪಡಿಸಿದ ಏಕನಾಥ್ ಶಿಂಧೆ

ಮುಂಬೈ: ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಹೊಸ ಸರಕಾರದ ರಚನೆಯ ಹಿಂದಿನ ನಿಜವಾದ “ಕಲಾಕರ್” (ಕಲಾವಿದ) ಎಂದು ಶ್ಲಾಘಿಸಿದ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಶಿವಸೇನೆ ವಿರುದ್ಧ ಬಂಡಾಯ ಏಳಲು ಕಳೆದ ತಿಂಗಳು ನಡೆದ ರಾಜ್ಯ ವಿಧಾನ ಪರಿಷತ್ ಚುನಾವಣೆಯು ಪ್ರಚೋದಕವಾಗಿತ್ತು ಎಂದು ಸೋಮವಾರ ಬಹಿರಂಗಪಡಿಸಿದ್ದಾರೆ.
"ವಿಧಾನಪರಿಷತ್ ಚುನಾವಣೆಯ (ಜೂನ್ 20) ಫಲಿತಾಂಶದ ದಿನ ಹಾಗೂ ನನ್ನನ್ನು ನಡೆಸಿಕೊಂಡ ರೀತಿಯಿಂದ... ಇನ್ನು ನಾನು ಹಿಂದೆ ಸರಿಯುವುದಿಲ್ಲ ಎಂದು ನಿರ್ಧರಿಸಿದ್ದೆ" ಎಂದು ಅವರು ವಿಶ್ವಾಸ ಮತ ಗೆದ್ದ ನಂತರ ವಿಧಾನಸಭೆಗೆ ತಿಳಿಸಿದರು.
ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿದ್ದ ಎಲ್ಲ ಐದು ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಕಾಂಗ್ರೆಸ್‌ನ ಚಂದ್ರಕಾಂತ್ ಹಂದೋರೆ ಸೋತಿದ್ದರು.ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿ ವಿರುದ್ಧ ಶಿವಸೇನೆಯ ಎರಡನೇ ಅಭ್ಯರ್ಥಿ ಸೋತಿದ್ದರು. ಇಲ್ಲಿ ಅಡ್ಡ ಮತದಾನದ ಶಂಕೆ ಇತ್ತು.
ಕಳೆದ ಗುರುವಾರ ಶಿಂಧೆ ಅವರು ಮುಖ್ಯಮಂತ್ರಿಯಾಗಿಯೂ ಹಾಗೂ ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿಯಾಗಿಯೂ ಪ್ರಮಾಣವಚನ ಸ್ವೀಕರಿಸಿದರು.