ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜು.11ಕ್ಕೆ ಸಿಎಂ ಮನೆಗೆ ಮುತ್ತಿಗೆ: ರಾಜ್ಯ ರೈತ ಸಂಘ ಎಚ್ಚರಿಕೆ
''ಸರಕಾರದ ಧೋರಣೆಗಳಿಂದ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ''

ಬೆಂಗಳೂರು, ಜು.5: ಕೇಂದ್ರ ಸರಕಾರ ಕಬ್ಬಿನ ಬೆಲೆ ನಿಗದಿ ಮಾಡಲು ಶೇ.10 ಇಳುವರಿಯ ಮಾನದಂಡ ವಿಧಿಸಿ ಕಾರ್ಖಾನೆಗೆ ಅನುಕೂಲ ಮಾಡಿಕಟ್ಟಿದೆ ಇದರಿಂದ ರಾಜ್ಯದಲ್ಲಿ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಜು.11ರಂದು ಮುಖ್ಯಮಂತ್ರಿ ಮನೆ ಮುತ್ತಿಗೆ ಹಾಕಲಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಎಚ್ಚರಿಕೆ ನೀಡಿದೆ.
ಮಂಗಳವಾರ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರೈತರಿಗೆ ಅನುಕೂಲವಾಗುವಂತೆ ಕಬ್ಬಿನ ಬೆಳೆಗೆ ಕನಿಷ್ಠ ಬೆಲೆ ನಿಗದಿ ಮಾಡಬೇಕು. ಹಿಂದಿನಿಂದ ಉಳಿಸಿಕೊಂಡು ಬಂದಿರುವ ಹಳೆ ಬಾಕಿ ಪಾವತಿ ಮಾಡಬೇಕು. ಕಬ್ಬು ಬೆಳೆಗಾರರು ಬೆಲೆ ಮೋಸ, ತೂಕದಲ್ಲಿ ವಂಚನೆ, ಬಾಕಿ ಪಾವತಿಯಲ್ಲಿ ವಿಳಂಬ ಇನ್ನೂ ಹತ್ತಾರು ಸಂಕಷ್ಟಗಳನ್ನು ಕೂಡಲೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಫೆಬ್ರವರಿ 2022ರಷ್ಟೊತ್ತಿಗೆ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಕೇಂದ್ರ ಸರಕಾರ ಹೇಳಿಕೆ ನೀಡಿತ್ತು. ಆದರೆ ರಸಗೊಬ್ಬರ ಮತ್ತು ಕೃಷಿಯ ಇತರೆ ಒಳಸುಳಿಗಳ ಬೆಲೆ ಗಗನಕ್ಕೇರಿಸಿ ವ್ಯವಸಾಯದ ಉತ್ಪಾದನಾ ವೆಚ್ಚ ದ್ವಿಗುಣಗೊಳಿಸಿದೆಯೇ ಹೊರತು ರೈತನ ಆದಾಯವನ್ನು ಹೆಚ್ಚಿಸಲಿಲ್ಲ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಕೃಷಿ ಉತ್ಪನ್ನಗಳಿಗೆ ಸ್ವಾಮಿನಾಥನ್ ವರದಿ ಪ್ರಕಾರ ಎಂಎಸ್‍ಪಿ ಬೆಲೆ ನಿಗದಿ ಮಾಡದಕೇಂದ್ರ ಸರಕಾರ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಬೆಂಬಲ ಬೆಲೆ ರಾಜ್ಯಗಳಲ್ಲಿ ಇದೆ ಎನ್ನುವ ಸರಕಾರ ಎಸ್‍ಎಪಿಯನ್ನು ಕಳೆದ 4 ವರ್ಷಗಳಿಂದಲೂ ಘೋಷಿಸಿಲ್ಲ ಎಂದು ಅವರು ಕಿಡಿಕಾರಿದರು.
ಸಂಘದ ಮುಖಂಡ ಪಿ.ಗೋಪಾಲ್ ಮಾತನಾಡಿ, ಸರಕಾರ ಹಳೇ ವಿದ್ಯುತ್ ಬಾಕಿಯನ್ನು ಪಾವತಿ ಮಾಡದೆ ವಸೂಲಿ ಮಾಡಲು ಬಲಾತ್ಕಾರ ಕ್ರಮ ಜರುಗಿಸುತ್ತಿದೆ. ಸಾಮಾನ್ಯವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಅವರ ಕುಟುಂಬದ ಬೆಳಕನ್ನು ನಂದಿಸುತ್ತಿದೆ. ಕೃಷಿ ಸಂಬಂಧಿತ ಉತ್ಪನ್ನಗಳ ಮೇಲೆ ಜಿಎಸ್‍ಟಿ ವಿಧಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಸಂಘದ ರವಿಕಿರಣ್ ಪೂರ್ಣಚ್ಚ, ಚಂದ್ರಶೇಖರ್ ಗೌಡ, ಗಂಗಣ್ಣ, ಕುಮಾರ್ ಆರ್.ಎಸ್. ಉಪಸ್ಥಿತರಿದ್ದರು.
ಸರಕಾರದ ಮೌನ, ರೈತರಿಗೆ ದ್ರೋಹ
ಉತ್ತರ ಕರ್ನಾಟಕದ ಬಹುತೇಕ ಕಬ್ಬಿನ ಕಾರ್ಖಾನೆಗಳನ್ನು ಬಿಜೆಪಿ, ಕಾಂಗ್ರೆಸ್, ಜನತಾದಳದಲ್ಲಿರುವ ರಾಜಕಾರಣಿಗಳೇ ನಡೆಸುತ್ತಿದ್ದು, ಸರಕಾರದಲ್ಲಿ ಮಂತ್ರಿಗಳಾಗಿಯೂ ಕೂಡ ಕಾರ್ಯಭಾರ ನಡೆಸುತ್ತಿದ್ದಾರೆ. ಇವರು ನಡೆಸುತ್ತಿರುವ ಕಾರ್ಖಾನೆಗಳಲ್ಲಿ ಕೇಂದ್ರ ಸರಕಾರ ಘೋಷಿಸಿರುವ ಎಫ್‍ಆರ್‍ಪಿ ಬೆಲೆಗಿಂತಲೂ ಕಡಿಮೆ ಬೆಲೆಗೆ ರೈತರಿಂದ ಕಬ್ಬನ್ನು ಖರೀದಿ ಮಾಡುತ್ತಿದ್ದಾರೆ. ಈ ಬೆಲೆಯನ್ನೂ ವಿಳಂಬವಾಗಿ ಪಾವತಿಸುತ್ತಿದ್ದಾರೆ. ಇದೆಲ್ಲ ಸರಕಾರ ಗಮನಕ್ಕೆ ಬಂದರೂ, ಜಾಣ ಮೌನ ವಹಿಸುತ್ತಾ ಕಬ್ಬು ಬೆಳಗಾರರಿಗೆ ದ್ರೋಹ ಬಗೆದಿದೆ.
-ಬಡಗಲಪುರ ನಾಗೇಂದ್ರ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ







