ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರಿದ ಮಳೆ; ಜು.6ರಿಂದ ನಾಲ್ಕು ದಿನಗಳ ಕಾಲ 5 ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ
ಇನ್ನೂ ಪತ್ತೆಯಾಗದ ಬಾಲಕಿ!

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿರುವ ಜಿಲ್ಲಾಧಿಕಾರಿ
ಚಿಕ್ಕಮಗಳೂರು, ಜು.5: ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ನಿರಂತರ ಮಳೆಯಿಂದಾಗಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಧರೆಕುಸಿತ ಉಂಟಾಗಿದ್ದು, ಜೀವನದಿಗಳ ನೀರಿನ ಮಟ್ಟ ಅಪಾಯದ ಅಂಚಿಗೆ ತಲುಪಿದೆ.
ಮಲೆನಾಡು ಭಾಗದ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕಿನಲ್ಲಿ ಮುಂಗಾರು ಮಳೆ ಅಬ್ಬರಿಸತೊಡಗಿದ್ದರೇ ಕಡೂರು ತಾಲೂಕಿನ ಎಮ್ಮೆದೊಡ್ಡಿ ಸೇರಿದಂತೆ ಕೆಲುವ ಭಾಗ ಹಾಗೂ ತರೀಕೆರೆ ತಾಲೂಕಿನ ತಣಿಗೆಬೈಲು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ಮಳೆ ಭತ್ತದ ಗದ್ದೆಗಳಿಗೆ ಅನುಕೂಲಕರವಾಗಿದ್ದರೆ, ಬಯಲು ಭಾಗದಲ್ಲಿ ತರಕಾರಿ ಬೆಳೆಗಳಿಗೆ ತೊಂದರೆಯಾಗಿದೆ.
ಬಯಲು ಭಾಗದ ತರೀಕೆರೆ ತಾಲೂಕಿನ ನಂದಿಬಟ್ಟಲು ಕಾಲನಿ-ಜಯಪುರ ಸಂಪರ್ಕ ರಸ್ತೆಗೆ ಬೃಹತ್ ಗಾತ್ರದ ಮರವೊಂದು ಅಡ್ಡಲಾಗಿ ಉರುಳಿ ಬಿದ್ದ ಪರಿಣಾಮ ಹಲವು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ನೆರವಿನೊಂದಿಗೆ ಮೆರವನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟಿದ್ದಾರೆ. ಆರದವಳ್ಳಿ ಗ್ರಾಮದಾದ್ಯಂತ ಬೆಳೆದಿರುವ ಆಲೂಗಡ್ಡೆ ಬೆಳೆಗೆ ಭಾರೀ ಮಳೆ ಅಂಗಮಾರಿ ಮತ್ತು ಕರುಕುರೋಗದ ಬಾಧೆ ಕಾಣಿಸಿಕೊಂಡಿದ್ದು, ಬೆಳೆ ನಾಶವಾಗುವ ಆತಂಕವನ್ನು ರೈತರು ಎದುರಿಸುವಂತಾಗಿದೆ.
----------------------
ಇನ್ನೂ ಪತ್ತೆಯಾಗದ ಬಾಲಕಿ: ಹೊಸಪೇಟೆಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗಮಾಡುತ್ತಿದ್ದ 7ವರ್ಷದ ಬಾಲಕಿ ಸುಪ್ರೀತಾ ಸೋಮವಾರ ಸಂಜೆ ಶಾಲೆಯಿಂದ ಮನೆಗೆ ತೆರಳುತ್ತಿದ್ದಾಗ ಕಾಫಿತೋಟದಲ್ಲಿ ಹರಿಯುತ್ತಿದ್ದ ಹಳ್ಳಕ್ಕೆ ನಿರ್ಮಿಸಿದ್ದ ಕಿರುಸೇತುವೆ ದಾಟುವಾಗ ಕಾಲುಜಾರಿ ಹಳ್ಳಕ್ಕೆ ಬಿದ್ದ ಪರಿಣಾಮ ಕೊಚ್ಚಿಕೊಂಡು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಬಾಲಕಿ ಇದುವರೆಗೂ ಪತ್ತೆಯಾಗಿಲ್ಲ. ಬಾಲಕಿ ಪತ್ತೆಗೆ ಬೆಂಗಳೂರಿನಿಂದ ಎನ್ಡಿಆರ್ಎಫ್ ತಂಡವನ್ನು ಕರೆಸಲು ಜಿಲ್ಲಾಡಳಿತ ಮುಂದಾಗಿದೆ ಎಂದು ತಿಳಿದು ಬಂದಿದೆ.
------------------------------
4ದಿನ ಶಾಲಾ ಕಾಲೇಜುಗಳಿಗೆ ರಜೆ: ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಜಿಲ್ಲೆಯ ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕಿನ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಹಾಗೂ ಚಿಕ್ಕಮಗಳೂರು ತಾಲೂಕಿನ ಶಾಲೆಗಳಿಗೆ (ಅಂಬಳೆ, ಲಕ್ಯಾ ಹೋಬಳಿ ಹೊರತು ಪಡಿಸಿ) ಜು.6ರಿಂದ 9ರವರೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಕಡೂರು, ತರೀಕೆರೆ, ಅಜ್ಜಂಪುರ ತಾಲೂಕು ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಣೆಯಾಗಿಲ್ಲ.
ಮಳೆಗೆಹಾನಿ: ಜೂ.1ರಿಂದ ಜು.5ರವರೆಗೆ ಒಂದು ತಿಂಗಳಲ್ಲಿ ಸುರಿದ ಮಳೆಗೆ ಗ್ರಾಮೀಣ ಭಾಗದ 37.55 ಕಿಲೋಮೀಟರ್ ರಸ್ತೆಗೆ ಹಾನಿಯಾಗಿದ್ದರೆ, 4 ಸೇತುವೆಗಳಿಗೆ ಹಾನಿಯಾಗಿದೆ. 7 ಸರಕಾರಿ ಪ್ರಥಮಿಕ ಶಾಲೆಗೆ ಹಾನಿಉಂಟಾಗಿದ್ದು, 466 ವಿದ್ಯುತ್ ಕಂಬಗಳ ಧರೆಗುರುಳಿವೆ. 932 ಮೀ. ವಿದ್ಯುತ್ ಲೈನ್ಗೆ ಹಾನಿಗೀಡಾಗಿದೆ. 1ಮನೆಗೆ ಪೂರ್ತಿಹಾನಿಯಾದರೆ, 23 ಮನೆಗೆ ಭಾಗಶಃ ಹಾನಿಯಾಗಿದೆ. ಭಾರೀ ಮಳೆಗೆ 1 ಹಸು ಅಸುನೀಗಿದೆ. ಜಿಲ್ಲಾದ್ಯಂತ ಸೋಮವಾರ ಮತ್ತು ಮಂಗಳವಾರ ಸುರಿದ ಭಾರೀ ಮಳೆಗೆ 28 ಮನೆಗಳಿಗೆ ಹಾನಿಯಾಗಿದ್ದು, 516 ವಿದ್ಯುತ್ಕಂಬಗಳು ಧರೆಗುರುಳಿವೆ. 56 ಕಿಲೋಮೀಟರ್ ರಸ್ತೆಹಾಳಾಗಿದ್ದು, 2 ನೀರಿನಟ್ಯಾಂಕ್ಗಳಿಗೆ ಧಕ್ಕೆಯಾಗಿದೆ. ಅಲ್ಲದೇ 2 ಶಾಲೆ, 7 ಸೇತುವೆಗಳಿಗೆ ಹಾನಿಯಾಗಿದೆ.
ಚಿಕ್ಕಮಗಳೂರು ತಾಲೂಕಿನ ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದರೇ, ಬಯಲು ಭಾಗದ ಲಕ್ಯಾ, ಅಂಬಳೆ ಹೋಬಳಿ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ನಗರದಲ್ಲೂ ನಿರಂತರ ಮಳೆಗೆ ಜನ ತತ್ತರಿಸಿದ್ದಾರೆ. ಕಡೂರು, ತರೀಕೆರೆ ಭಾಗದಲ್ಲೂ ಸಾಧಾರಣ ಮಳೆ ಮುಂದುವರಿದಿದೆ.
ಕಿಗ್ಗದಲ್ಲಿ ಹೆಚ್ಚು ಮಳೆ: ಕಾಫಿನಾಡಿನಲ್ಲಿ ಜೋರುಮಳೆ ಮುಂದುವರೆದಿದ್ದು, ಶೃಂಗೇರಿ ತಾಲೂಕಿನ ಮಳೆದೇವರೆಂದೇ ಪ್ರಸಿದ್ಧಿ ಪಡೆದಿರುವ ಕಿಗ್ಗದಲ್ಲಿ 188.5 ಮಿಲಿಮೀಟರ್ ಅಧಿಕಮಳೆಯಾಗಿದೆ. ಜಿಲ್ಲೆಯಲ್ಲಿ ವಿವಿಧೆಡೆ ಬಿದ್ದಿರುವ ಮಳೆ ವಿವರ ಮಿಲಿಮೀಟರ್ಗಳಲ್ಲಿ ಇಂತಿದೆ.
ಚಿಕ್ಕಮಗಳೂರು ಕಸಬಾ 10.1, ವಸ್ತಾರೆ 22,ಜೋಳದಾಳ್ 25 35, ಅತ್ತಿಗುಂಡಿ 48.5, ಸಂಗಮೇಶ್ವರಪೇಟೆ 43.5, ಬ್ಯಾರುವಳ್ಳಿ 53.4, ಕಳಸಾಪುರ 6, ದಾಸರಹಳ್ಳಿ 12.4, ಮೂಡಿಗೆರೆ 65, ಕೊಟ್ಟಿಗೆಹಾರ 106, ಗೋಣಿಬೀಡು 43.1, ಜಾವಳಿ 59, ಹಿರೇಬೈಲು 75,ಕಳಸ 78.4 ಹೊಸಕೆರೆ 82,2, ಬೆಳ್ಳೂರು 72, ನರಸಿಂಹರಾಜಪುರ 42.2, ಬಾಳೆಹೊನ್ನೂರು 58.2, ಮೇಗರಮಕ್ಕಿ 62, ಶೃಂಗೇರಿ 118.4, ಕೆರೆಕಟ್ಟೆ 176.5 ಕೊಪ್ಪ 124, ಹರಿಹgಪುರ 124 ಜಯಪುರ 102, ಬಸರಿಕಟ್ಟೆ 89.2, ಕಮ್ಮರಡಿ 130.4, ತರೀಕೆರೆ 13.6 ಲಕ್ಕವಳ್ಳಿ 16.4, ರಂಗೇನಹಳ್ಳಿ 13.8, ಲಿಂಗದಹಳ್ಳಿ 16.6, ಉಡೇವಾ 1`2.2, ತಣಿಗೆಬೈಲು 19.2, ತ್ಯಾಗದಬಾಗಿ 16.2, ಹುಣಸಘಟ್ಟ 8, ಕಡೂರು 12, ಸಖರಾಯಪಟ್ಟಣ 8.2, ಸಿಂಗಟಗೆರೆ 23, ಪಂಚನಹಳ್ಳಿ 4.2, ಎಮ್ಮೆದೊಡ್ಡಿ 42.2, ಯಗಟಿ 2.2,ಗಿರಿಯಾಪುರ, ಬಾಸೂರು 7.2 ಚೌಳಹಿರಿಯೂರು 14.16, ಅಜ್ಜಂಪುರ 7, ಬುಕ್ಕಾಂಬುದಿಯಲ್ಲಿ 9.2 ಮಿಲಿಮೀಟರ್ ಮಳೆಯಾಗಿದೆ.
.jpg)







