ಉಡುಪಿ ನಗರದ ವಿವಿಧೆಡೆ ಕೃತಕ ನೆರೆ; ಗರೋಡಿ ಸಹಿತ 20ಕ್ಕೂ ಅಧಿಕ ಮನೆಗಳು ಜಲಾವೃತ

ಉಡುಪಿ: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಇಂದ್ರಾಣಿ ನದಿ ಉಕ್ಕಿ ಹರಿಯುತ್ತಿದ್ದು, ಇದರಿಂದ ಉಡುಪಿ ನಗರದ ಬನ್ನಂಜೆ, ಮೂಡನಿಡಂಬೂರು, ಮಠದಬೆಟ್ಟು ಬೈಲಕೆರೆ ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗಿ ಗರೋಡಿ ಸೇರಿದಂತೆ 20ಕ್ಕೂ ಅಧಿಕ ಮನೆಗಳು ಜಲಾವೃತ ಗೊಂಡಿವೆ.
ಬನ್ನಂಜೆ ಮೂಡನಿಡಂಬೂರು ಗರಡಿ ರಸ್ತೆಯಲ್ಲಿನ ಇಂದ್ರಾಣಿ ನದಿ ತುಂಬಿ ರಸ್ತೆಯಲ್ಲೇ ನೀರು ಹರಿದು ಹೋಗುತ್ತಿದ್ದು, ಇದರಿಂದ ಇಲ್ಲಿನ 10ಕ್ಕೂ ಅಧಿಕ ಮನೆಗಳ ರಸ್ತೆ ಸಂರ್ಪಕ ಕಡಿದು ಹೋಗಿವೆ. ಅಲ್ಲದೆ ವಸತಿ ಪ್ರದೇಶ, ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಹಲವು ಮನೆಗಳ ಅಂಗಳಕ್ಕೆ ನೀರು ನುಗ್ಗಿವೆ.
ಪ್ರತಿವರ್ಷದಂತೆ ಈ ವರ್ಷವೂ ಮೂಡನಿಡಂಬೂರು ಶ್ರೀಬ್ರಹ್ಮಬೈದರ್ಕಳ ಗರೋಡಿ ಆವರಣ ಸಂಪೂರ್ಣ ನೀರಿನಿಂದ ಆವರಿಸಿ, ಒಳಗಡೆ ನೀರು ನುಗ್ಗಿದೆ. ಗರಡಿ ಸುತ್ತಮುತ್ತಲಿನ 10ಕ್ಕೂ ಅಧಿಕ ಮನೆಗಳು ಜಲ ದಿಗ್ಭಂಧನಕ್ಕೆ ಒಳಗಾಗಿದೆ. ಇದರಿಂದ ಇಲ್ಲಿನ ವಾಸಿಗಳು ಸುಮಾರು ಅರ್ಧ ಕಿ.ಮೀ. ದೂರದಲ್ಲೇ ತಮ್ಮ ದ್ವಿಚಕ್ರ ವಾಹನಗಳನ್ನು ಇಟ್ಟು ಮನೆಗೆ ನೀರಿನಲ್ಲಿ ಸಾಗುವ ಸ್ಥಿತಿ ಎದುರಾಗಿದೆ.
ಕೆಂಪುಪಟ್ಟಿ ಅಳವಡಿಕೆ: ನಿಟ್ಟೂರು ಅಡ್ಕದಕಟ್ಟೆಯಲ್ಲೂ ಕೃತಕ ನೆರೆ ಉಂಟಾಗಿ ರಸ್ತೆಯಲ್ಲೇ ನೀರು ಹರಿಯುತ್ತಿರು ವುದು ಕಂಡುಬಂದಿದೆ. ಇದರಿಂದ ಈ ಪರಿಸರದ ಸುಮಾರು ಹಲವು ಮನೆಗಳು ಜಲಾವೃತಗೊಂಡಿದೆ. ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ನೆರೆ ಪೀಡಿತ ಬನ್ನಂಜೆ, ಮೂಡನಿಡಂಬೂರು, ನಿಟ್ಟೂರು ಪ್ರದೇಶಕ್ಕೆ ಉಡುಪಿ ನಗರಸಭೆ ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ, ಪರಿಸರ ಇಂಜಿನಿ ಯರ್ ಸೇರಿದಂತೆ ಅಧಿಕಾರಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ನೀರು ರಸ್ತೆಯಲ್ಲೇ ಹರಿಯುತ್ತಿರುವುದರಿಂದ ನೀರಿನಿಂದ ತುಂಬಿರುವ ತೋಡು, ಚರಂಡಿ ಬದಿ ಜನರು ಓಡಾದಂತೆ ಮತ್ತು ವಾಹನ ಸಂಚರಿಸದಂತೆ ನಗರಸಭೆಯವರು ಅಪಾಯ ಸೂಚಿಸುವ ಕೆಂಪು ಪಟ್ಟಿಯನ್ನು ಆಳವಡಿಸಿದ್ದಾರೆ.
ಒಳಚರಂಡಿ ತ್ಯಾಜ್ಯ: ನೆರೆಯ ನೀರು ರಸ್ತೆಯಲ್ಲೇ ಹರಿದ ಪರಿಣಾಮ ಇಲ್ಲಿನ ಒಳಚರಂಡಿಯ ಮ್ಯಾನ್‌ಹೋಲ್ ತೆರೆದುಕೊಂಡಿದ್ದು, ಇದರಿಂದ ನೆರೆಯ ನೀರಿನೊಂದಿಗೆ ಡ್ರೈನೇಜ್ ತ್ಯಾಜ್ಯ ಕೂಡ ಹರಿಯುತ್ತಿದೆ.
ಇಡೀ ನಗರದ ತ್ಯಾಜ್ಯ ಹರಿದು ಹೋಗುತ್ತಿರುವ ಒಳಚರಂಡಿಯ ಗಲೀಜು ನೀರಿನಿಂದ ಪರಿಸರ ಗಬ್ಬು ನಾರುತ್ತಿದೆ. ತ್ಯಾಜ್ಯ ನೀರು ಇಲ್ಲಿನ ಬಾವಿ, ಮನೆ ಅಂಗಳಕ್ಕೂ ಹರಿದುಬರುತ್ತಿವೆ. ಇದರ ಪರಿಣಾಮ ಸಾಂಕ್ರಾಮಿಕ ರೋಗ ಹರಡುವ ಭೀತಿ ಕೂಡ ಇಲ್ಲಿನ ಜನರನ್ನು ಕಾಡುತ್ತಿದೆ. ಇದಕ್ಕೆ ಕಾರಣವಾಗಿರುವ ಉಡುಪಿ ನಗರಸಭೆ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾರ್ಕಿಂಗ್ ಏರಿಯಾದಲ್ಲಿ ನೆರೆ: ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ನೆರೆ ಉಂಟಾಗಿದ್ದು ಭಕ್ತರ ವಾಹನಗಳು ನೀರಿನಲ್ಲೇ ನಿಲ್ಲುವಂತಾ ಗಿದೆ. ನೆರೆಯ ನೀರಿನಲ್ಲಿಯೇ ಭಕ್ತರು ದೇವಸ್ಥಾನಕ್ಕೆ ಸಾಗುತ್ತಿರುವ ದೃಶ್ಯ ಕಂಡು ಬಂತು.
ಅಲ್ಲೇ ಸಮೀಪದ ಬೈಲಕೆರೆಯ ವಸತಿ ಸಮುಚ್ಛಯದ ಪಾರ್ಕಿಂಗ್ ಪ್ರದೇಶಕ್ಕೆ ಮಳೆಯ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ. ನಿರಂತರವಾಗಿ ಮಳೆ ಸುರಿ ಯುತ್ತಿರುವುದರಿಂದ ಮುನ್ನಚ್ಚರಿಕೆ ಕ್ರಮವಾಗಿ ಅಗತ್ಯ ಇರುವ ಮೂಡ ನಿಡಂಬೂರು ಗರಡಿ ಸಮೀಪ, ನಿಟ್ಟೂರು ಅಡ್ಕದಕಟ್ಟೆಯಲ್ಲಿ ದೋಣಿ ವ್ಯವಸ್ಥೆ ಯನ್ನು ಮಾಡಲಾಗಿದೆ.
ಗದ್ದೆಗಳು ಜಲಾವೃತ: ಬನ್ನಂಜೆ ಶನೀಶ್ವರ ದೇವಸ್ಥಾನದ ಪರಿಸರದಲ್ಲೂ ಕೃತಕ ನೆರೆ ಉಂಟಾಗಿ ಮನೆಗಳು ಜಲಾವೃತಗೊಂಡಿವೆ. ಅದೇ ರೀತಿ ಮಠದಬೆಟ್ಟು, ಕಲ್ಸಂಕದ ಕೆಲವು ತಗ್ಗು ಪ್ರದೇಶಗಳು ನೆರೆಯಿಂದ ಆವರಿಸಿಕೊಂಡಿವೆ.
ಅಲ್ಲದೆ ಪರ್ಕಳ, ಮಲ್ಪೆ, ಕೊಡವೂರು, ಕೊಡಂಕೂರು, ತೆಂಕನಿಡಿ ಯೂರು ಗ್ರಾಮಗಳ ಗದ್ದೆ, ತಗ್ಗು ಪ್ರದೇಶ ಗಳಲ್ಲೂ ನೀರು ನಿಂತಿರುವ ಬಗ್ಗೆ ವರದಿ ಯಾಗಿದೆ. ಮಳೆಯ ಅಬ್ಬರ ಮಧ್ಯಾಹ್ನದ ಬಳಿಕ ಕಡಿಮೆಯಾದ ಪರಿಣಾಮ ಕೆಲವು ಕಡೆಗಳಲ್ಲಿ ನೆರೆ ಕೂಡ ಇಳಿದಿದೆ ಎಂದು ತಿಳಿದುಬಂದಿದೆ.
"ನಗರದ ನಿಟ್ಟೂರು, ಮೂಡನಿಡಂಬೂರು ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿದ್ದು, ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ಕೆಲವು ಮನೆಗಳಿಗೆ ಸಮಸ್ಯೆ ಆಗಿದೆ. ಈ ಸಂಬಂಧ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಗಿದೆ. ನೆರೆಯ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ನಗರಸಭೆಯಿಂದ ಮಾಡಲಾಗಿದೆ".
-ಡಾ.ಉದಯ ಕುಮಾರ್ ಶೆಟ್ಟಿ, ಪೌರಾಯುಕ್ತರು
"ನೆರೆಯಿಂದಾಗಿ ಮೂಡನಿಡಂಬೂರು ಪರಿಸರದ 20 ಮನೆಗಳಿಗೆ ತುಂಬಾ ಸಮಸ್ಯೆ ಆಗುತ್ತಿದೆ. ಬೇಸಿಗೆ ಕೊನೆಯಲ್ಲಿ ತೋಡು ಶುಚಿಗೊಳಿಸದ ಪರಿಣಾಮ ಒಂದೇ ಮಳೆಗೆ ಇಲ್ಲಿ ನೆರೆ ಉಂಟಾಗಿದೆ. ಇದು ಇಲ್ಲಿನ ಪ್ರತಿವರ್ಷದ ಸಮಸ್ಯೆ ಆಗಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ನಗರಸಭೆಯವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ನೆರೆಯ ಮಧ್ಯೆ ಡೈನೇಜ್ ಸಮಸ್ಯೆ ಕೂಡ ಉಂಟಾ ಗುತ್ತಿದೆ. ತ್ಯಾಜ್ಯ ನೀರು ರಸ್ತೆಯಲ್ಲೇ ಹರಿಯುತ್ತದೆ".
-ವಿಶ್ವನಾಥ್, ಮೂಡನಿಡಂಬೂರು ನಿವಾಸಿ













