ಬೈಂದೂರು; ಉಕ್ಕಿ ಹರಿಯುತ್ತಿರುವ ನದಿಗಳು: ತೀರದ ಗ್ರಾಮಗಳಿಗೆ ಮುಳುಗಡೆ ಭೀತಿ

ಉಡುಪಿ: ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ತೀರ ಗ್ರಾಮಗಳಿಗೆ ಮುಳುಗುವ ಭೀತಿ ಎದುರಾಗಿದೆ. ಮಂಗಳವಾರ ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ಕಡಲ್ಕೊರೆತ ತೀವ್ರಗೊಂಡಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಅತ್ಯಂತ ಹೆಚ್ಚು ಅಂದರೆ ೧೪೧.೮ ಮಿ.ಮೀ. ಮಳೆಯಾಗಿದ್ದು, ಉಳಿದಂತೆ ಉಡುಪಿ- ೫೮.೯ಮಿ.ಮೀ., ಬ್ರಹ್ಮಾವರ-೮೫.೯ಮಿ.ಮೀ., ಕಾಪು-೫೦.೬ಮಿ.ಮೀ., ಕುಂದಾಪುರ-೭೮.೮ಮಿ.ಮೀ., ಬೈಂದೂರು-೬೭.೩ಮಿ.ಮೀ., ಕಾರ್ಕಳ- ೭೫.೬ ಮಿ.ಮೀ. ಹಾಗೂ ಜಿಲ್ಲೆಯಲ್ಲಿ ಸರಾಸರಿ ೮೧.೬ಮಿ.ಮೀ.ಮಳೆಯಾಗಿದೆ.
ಬೈಂದೂರಿನ ತಾಲೂಕಿನ ಸೌಪರ್ಣಿಕ ನದಿ ನೀರಿನ ಮಟ್ಟ ಹೆಚ್ಚುತ್ತಿರುವುದ ರಿಂದ ಇಲ್ಲಿನ ಸಾಲ್ಬುಡ-ನಾವುಂದ ಬಡಾಕೆರೆ, ಮರವಂತೆ, ಚಿಕ್ಕಳ್ಳಿ, ಪಡುಕೋಣೆ, ಅರೆಹೊಳೆ ಮುಂತಾದ ಪ್ರದೇಶಗಳು ಮುಳುಗಡೆ ಭೀತಿಯಲ್ಲಿವೆ. ಇಲ್ಲಿನ ಸಾವಿರಾರು ಎಕರೆ ಕೃಷಿ ಭೂಮಿಗಳು ನೆರೆಯಿಂದ ಸಂಪೂರ್ಣ ಜಲಾವೃತ ಗೊಂಡಿದ್ದು, ಸ್ಥಳೀಯರು ಜಾನುವಾರುಗಳನ್ನು ಸಾಗಿಸಲು ಹರಸಾಹಸ ಪಡು ತ್ತಿದ್ದಾರೆ. ಬೈಂದೂರು ತಹಸೀಲ್ದಾರ್ ಕಿರಣ್ ಗೌರಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆಯಿಂದಾಗಿ ಬೈಂದೂರು ತಾಲೂಕಿನ ಶಿರೂರು ಗ್ರಾಮದ ಮೂಸಾ ಕುಲ್ಸುಂಬಿ ಅವರ ಮನೆ ಭಾಗಶಃ ಹಾನಿಯಾಗಿದ್ದು, ಸುಮಾರು ೭೫,೦೦೦ರೂ. ನಷ್ಟ ಉಂಟಾಗಿದೆ. ನಾಡ ಗ್ರಾಮದ ಪಿ.ಸುಬ್ರಾಯ ಹೆಬ್ಬಾರ್ ಅವರ ವಾಸ್ತವ್ಯದ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿಯಾಗಿ ಸುಮಾರು ೫೦,೦೦೦ರೂ. ನಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದರು. ಇದರಿಂದ ಆಗಲೇ ಶಾಲೆಗೆ ಹೊರಟ ಮಕ್ಕಳು ತೊಂದರೆ ಅನುಭವಿಸುವಂತಾಯಿತು. ಕೆಲವು ಶಾಲೆಗಳಿಗೆ ಮಕ್ಕಳು ಬಂದಿರುವುದರಿಂದ ಸಂಜೆಯವರೆಗೆ ತರಗತಿ ನಡೆಸಿರುವ ಬಗ್ಗೆ ತಿಳಿದು ಬಂದಿದೆ.
"ಮಳೆಯಿಂದ ಹಲವು ಗ್ರಾಮಗಳಲ್ಲಿ ನೆರೆ ಭೀತಿ ಎದುರಾಗಿದ್ದು, ಅಂತಹ ಗ್ರಾಮಗಳ ಜನರಿಗೆ ಅಗತ್ಯ ಮುನ್ಸೂಚನೆ ನೀಡಲಾಗಿದೆ. ಅಗತ್ಯ ಬಿದ್ದಲ್ಲಿ ಇಲ್ಲಿನ ನಾಗರಿಕರನ್ನು ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ದೋಣಿ ಬೇಡಿಕೆ ಇರುವಲ್ಲಿ ಅದರ ವ್ಯವಸ್ಥೆಯನ್ನು ಮಾಡಲಾಗುತ್ತದೆ".
-ಕಿರಣ್ ಗೌರಯ್ಯ, ಬೈಂದೂರು ತಹಶೀಲ್ದಾರ್
ವಾರಾಹಿ ಕಾಲುವೆ ಭಾಗ ಕುಸಿತ!
ಕುಂದಾಪುರ ತಾಲೂಕಿನ ಕೋಡಿ, ಹಳೆಅಳಿವೆ ಭಾಗದಲ್ಲಿ ಕಡಲ್ಕೊರೆತ ಹೆಚ್ಚಿದೆ. ತೆಕ್ಕಟ್ಟೆ, ಕಟ್ಕೇರಿ, ಕಾಳಾವರ, ಮಲ್ಯಾಡಿ, ಕೋಟೇಶ್ವರ ಭಾಗದಲ್ಲಿ ಕೃಷಿ ಭೂಮಿ ಜಲಾವೃತಗೊಂಡು ಅಪಾರ ಹಾನಿ ಸಂಭವಿಸಿದೆ. ಹೆದ್ದಾರಿಯಲ್ಲಿ ಕೃತಕ ಕೆರೆ ಸೃಷ್ಟಿಯಾಗಿದೆ.
ಕಾಳಾವರದಲ್ಲಿ ಗಾಳಿಮಳೆಯಿಂದಾಗಿ ಮರ ಬಿದ್ದು ವಿದ್ಯುತ್ ಕಂಬ ಧರೆಶಾಹಿ ಯಾಗಿದೆ. ಇದರಿಂದ ಕೋಟೇಶ್ವರ-ಹಾಲಾಡಿ ರಾಜ್ಯ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತ ಗೊಂಡಿತು. ವಕ್ವಾಡಿ ಸಮೀಪ ನಡೆಯುತ್ತಿರುವ ವಾರಾಹಿ ಕಾಮಗಾರಿಗೆ ಸಂಬಂಧಿಸಿ ಕಾಲುವೆಯ ಕೆಲವು ಮೀಟರ್ ಭಾಗ ಕುಸಿದಿರುವ ಬಗ್ಗೆ ವರದಿಯಾಗಿದೆ.
ಮರವಂತೆಯಲ್ಲಿ ಮತ್ತೆ ತೀವ್ರಗೊಂಡ ಕಡಲ್ಕೊರೆತ
ಭಾರೀ ಮಳೆಯಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಮರವಂತೆ ಯಲ್ಲಿ ಕಡಲು ಕೊರೆತ ಮತ್ತಷ್ಟು ತೀವ್ರಗೊಂಡಿದೆ. ಇಲ್ಲಿನ ತೆಂಗಿನ ಮರಗಳು ಹಾಗೂ ಮೀನುಗಾರಿಕೆ ಸಲಕರಣೆಗಳು, ಶೆಡ್‌ಗಳು ಹಾಗೂ ತಡೆ ಗೋಡೆಯ ಕಲ್ಲುಗಳು ಸಮುದ್ರ ಪಾಲಾಗಿವೆ.
ಮಂಗಳವಾರ ಬೆಳಗ್ಗೆಯಿಂದ ಸಮುದ್ರದ ಅಬ್ಬರದ ಅಲೆಗಳು ಹೆಚ್ಚಾಗಿದ್ದು, ಇದರಿಂದ ತೀರ ಪ್ರದೇಶದಲ್ಲಿ ಅಪಾಯದ ಪರಿಸ್ಥಿತಿ ಉಂಟಾಗಿದೆ. ಕಡಲು ಕೊರತೆ ಇದೇ ರೀತಿ ಮುಂದುವರಿದರೆ ಇಲ್ಲಿನ ನೂರಾರು ಮೀನು ಗಾರರ ಮನೆಗಳಿಗೆ ಹಾನಿಯಾಗುವ ಮತ್ತು ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಎದುರಾಗಿದೆ.
ಈಗಾಗಲೇ ಅಧಿಕಾರಿಗಳು ಬಂದು ಹೋದರು ಏನು ಪ್ರಯೊಜನೆ ಆಗಲಿಲ್ಲ. ಶಾಸಕರು ಹಾಗೂ ಸಂಸದರು ಇತ್ತ ಕಡೆ ಗಮನಹರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಸಮುದ್ರ ಕೊರೆತದ ಹಿನ್ನೆಲೆಯಲ್ಲಿ ಮೀನುಗಾರರ ಸೇವಾ ಸಮಿತಿಯಿಂದ ಮಣ್ಣನ್ನು ಚೀಲಕ್ಕೆ ತುಂಬಿ ತಾತ್ಕಾಲಿಕ ತಡೆಗೋಡಿ ನಿರ್ಮಿಸಲಾಗುತ್ತಿದೆ. ಸೇವಾ ಸಮಿತಿ ಅಧ್ಯಕ್ಷ ವಾಸುದೇವ, ಚಂದ್ರ ಖಾರ್ವಿ, ಸುದರ್ಶನ್, ಸತೀಶ್, ಗ್ರಾಮಸ್ಥರು ಹಾಜರಿದ್ದರು.
