ಹೆಬ್ರಿ: ಉಕ್ಕಿ ಹರಿದ ಸೀತಾನದಿ: 2 ತಾಸು ರಾ.ಹೆದ್ದಾರಿ ಸಂಚಾರ ಸ್ಥಗಿತ

ಹೆಬ್ರಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದ ಸೀತಾನದಿ ಉಕ್ಕಿ ಹರಿದಿದ್ದು, ಇದರ ಪರಿಣಾಮ ಮಂಗಳವಾರ ಬೆಳಗ್ಗೆ ಸೀತಾನದಿ ರಾಷ್ಟ್ರೀಯ ಹೆದ್ದಾರಿ ೧೬೯ ಎ ಮುಳುಗಡೆಗೊಂಡು ಎರಡು ತಾಸು ಸಂಚಾರ ಸ್ಥಗಿತಗೊಂಡಿತ್ತು.
ನದಿ ನೀರು ಹರಿದು ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೂವರೆ ಅಡಿಯಷ್ಟು ನೀರು ನಿಂತಿತ್ತು. ಇದರಿಂದ ಹೆಬ್ರಿ- ಆಗುಂಬೆ ಮಧ್ಯೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಸುಮಾರು ಒಂದೂವರೆ ಗಂಟೆಯ ಬಳಿಕ ನೀರು ಇಳಿದು ಹೋಗಿದ್ದು, ಬಳಿಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಹೆಬ್ರಿ-ಸಿದ್ದಾಪುರ ರಾಜ್ಯ ಹೆದ್ದಾರಿಯ ಮದಗದ (ಇಂದಿರಾ ನಗರ) ಬಳಿ ಕೃತಕ ನೆರೆ ಉಂಟಾಗಿದ್ದು, ಇದರಿಂದ ಕೆಲಕಾಲ ಸಂಚಾರಕ್ಕೆ ತೊಡಕು ಉಂಟಾಯಿತು. ಬಳಿಕ ಹೆಬ್ರಿ ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್ ಅಧ್ಯಕ್ಷೆ ಮಾಲತಿ ಸೂಚನೆಯಂತೆ ವಾರ್ಡ್ ಸದಸ್ಯ ಸುಧಾಕರ ಹೆಗ್ಡೆ ನೇತೃತ್ವದಲ್ಲಿ ಜೆಸಿಬಿ ಯಂತ್ರದ ಮೂಲಕ ನೀರು ಹರಿದು ಹೋಗಲು ವ್ಯವಸ್ಥೆ ಮಾಡಲಾಯಿತು.
ಅದೇ ರೀತಿ ವರಂಗ, ಶಿವಪುರದಲ್ಲೂ ಕೃತಕ ನೆರೆ ಉಂಟಾಗಿದ್ದು, ಗದ್ದೆಗಳು ಜಲಾವೃತಗೊಂಡಿವೆ. ಇದರ ಪರಿಣಾಮ ಹೆಬ್ರಿ ತಾಲೂಕಿನಾದ್ಯಂತ ಗದ್ದೆಗಳಲ್ಲಿ ಬಿತ್ತಿರುವ ಬೀಜಗಳು ನೀರಿನಲ್ಲಿ ತೊಯ್ದುಕೊಂಡು ಹೋಗಿದ್ದು, ಅಪಾರ ನಷ್ಟ ಉಂಟಾಗಿದೆ ಎಂದು ಸ್ಥಳೀಯ ರೈತರು ತಿಳಿಸಿದ್ದಾರೆ. ಸ್ಥಳಕ್ಕೆ ಹೆಬ್ರಿ ತಹಶೀಲ್ದಾರ್ ಪುರಂದರ ಕೆ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.







