ರಾಜ್ಯದಲ್ಲಿ 32,000 ಕೋಟಿ ರೂ. ಹೂಡಿಕೆ ಮಾಡಿದ ಪೆಟ್ರೋನಾಸ್ ಹೈಡ್ರೋಜನ್, ಕಾಂಟಿನೆಂಟಲ್ ಇಂಡಿಯಾ
ಮಂಗಳೂರಿನಲ್ಲಿ ನವೀಕರಿಸಬಹುದಾದ ಇಂಧನ ಘಟಕ ಸ್ಥಾಪನೆ

ಬೆಂಗಳೂರು, ಜು.5: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಇಂದು ಮಲೇಷ್ಯಾ ಮೂಲದ ಪೆಟ್ರೋನಾಸ್ ಹೈಡ್ರೋಜನ್ ಮತ್ತು ಕಾಂಟಿನೆಂಟಲ್ ಇಂಡಿಯಾ ಸಂಸ್ಥೆಗಳು 32,200 ಕೋಟಿ ರೂ. ಹೂಡಿಕೆ ಮಾಡುವ ಸಂಬಂಧ ರಾಜ್ಯ ಸರಕಾರದೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿವೆ.
ರಾಜ್ಯ ಸರಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ ಹಾಗೂ ಪೆಟ್ರೋನಾಸ್ ಹೈಡ್ರೋಜನ್ ಸಿಇಓ ಅದ್ಲಾನ್ ಅಹ್ಮದ್, ಕಾಂಟಿನೆಂಟಲ್ ಇಂಡಿಯಾದ ಸಿಇಓ ಪ್ರಶಾಂತ್ ದೊರೆಸ್ವಾಮಿ ತಮ್ಮ ಕಂಪನಿ ಪರವಾಗಿ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಸಂದರ್ಭದಲ್ಲಿ ರಾಜ್ಯದೊಂದಿಗೆ ಮಾಡಿಕೊಂಡಿರುವ ಈ ಹೂಡಿಕೆ ಒಪ್ಪಂದಗಳು ನಿಗದಿತ ಅವಧಿಯಲ್ಲಿ ಜಾರಿಗೆ ಬರುವಂತಾಗಬೇಕು. ಇದಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ರಾಜ್ಯ ಸರಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಎರಡೂ ಕಂಪೆನಿಗಳ ಮುಖ್ಯಸ್ಥರಿಗೆ ತಿಳಿಸಿದರು.
ಪೆಟ್ರೋನಾಸ್ ಹೈಡ್ರೋಜನ್ ಸಂಸ್ಥೆಯು ಮಂಗಳೂರಿನಲ್ಲಿ ನವೀಕರಿಸಬಹುದಾದ ಇಂಧನ ಘಟಕವನ್ನು ಸ್ಥಾಪಿಸಲು 31,200 ಕೋಟಿ ರೂ. ಹೂಡಿಕೆ ಮಾಡುವ ಸಂಬಂಧ ಸಹಿ ಹಾಕಿದೆ. ಇದರಿಂದ 3,000 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ಕಾಂಟಿನೆಂಟಲ್ ಇಂಡಿಯಾ ತನ್ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ವಿದೇಶಿ ನೇರ ಹೂಡಿಕೆ (ಎಫ್‍ಡಿಐ) ಮೂಲಕ 1000 ಕೋಟಿ ರೂ. ಬಂಡವಾಳ ಹೂಡಲಿದ್ದು, ಇದರಿಂದ 6000 ಜನರಿಗೆ ಉದ್ಯೋಗ ದೊರೆಯಲಿದೆ.
ಆಟೋಮೋಟಿವ್ ಸಾಫ್ಟ್‍ವೇರ್ ಅಭಿವೃದ್ಧಿ, ಸಂವಹನ ತಂತ್ರಜ್ಞಾನ ಉದ್ಯಮದಲ್ಲಿ ತೊಡಗಿರುವ ಟೆಕ್ ಕಂಪನಿ ಕಾಂಟಿನೆಂಟಲ್-ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಟೆಕ್ನಿಕಲ್ ಸೆಂಟರ್ ಇಂಡಿಯಾ(ಟಿಸಿಐ)ಯ ವಿಸ್ತರಣೆಗಾಗಿ 1000 ಕೋಟಿ ರೂ.ಬಂಡವಾಳ ಹೂಡಲು ಮುಂದೆ ಬಂದಿದೆ. ಬೆಂಗಳೂರಿನಲ್ಲಿ ಬೆಳೆಯುತ್ತಿರುವ ಆಟೋಮೋಟಿವ್ ಆರ್ ಅಂಡ್ ಡಿ ಪರಿಸರ ವ್ಯವಸ್ಥೆಗೆ ಈ ಪ್ರಸ್ತಾವಿತ ಹೂಡಿಕೆ ಪೂರಕವಾಗಲಿದೆ.
ನವೀಕರಿಸಬಹುದಾದ ಇಂಧನ ವಲಯ; ಕರ್ನಾಟಕ ಮುಂಚೂಣಿಯಲ್ಲಿ: ಇತ್ತೀಚೆಗೆ ಸ್ವಿಟ್ಜರ್‍ಲ್ಯಾಂಡ್‍ನ ದಾವೊಸ್‍ನಲ್ಲಿ ರೆನ್ಯೂ ಪವರ್ ಕಂಪೆನಿಯವರು ನವೀಕರಿಸಬಹುದಾದ ಇಂಧನ ವಲಯದಲ್ಲಿ 50 ಸಾವಿರ ಕೋಟಿ ರೂ.ಹೂಡಿಕೆ ಒಪ್ಪಂದ ಮಾಡಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು. ಜತೆಗೆ, ಆಕ್ಮೆ(ACME) ಕ್ಲೀನ್ ಟೆಕ್ ಸಲ್ಯುಷನ್ಸ್ ಕಂಪೆನಿ ಮಂಗಳೂರಿನಲ್ಲಿ ಹೈಡ್ರೋಜನ್ ಮತ್ತು ಅಮೋನಿಯಾ ಘಟಕ ಹಾಗೂ ಪೂರಕವಾಗಿ ಸೋಲಾರ್ ಘಟಕ ಸ್ಥಾಪನೆಗೆ 52 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಸಂಬಂಧ ರಾಜ್ಯ ಸರಕಾರದೊಂದಿಗೆ ಕಳೆದ ತಿಂಗಳು ಒಪ್ಪಂದ ಮಾಡಿಕೊಂಡಿತ್ತು. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮಂಚೂಣಿಯಲ್ಲಿದೆ. ರಾಜ್ಯ ಸರಕಾರವು ಗ್ರೀನ್ ಹೈಡ್ರೋಜನ್ ನೀತಿಯನ್ನು ರೂಪಿಸುತ್ತಿದೆ.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ, ಐಟಿ ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ಕೈಗಾರಿಕಾಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.







