ನನ್ನನ್ನು ಹಿತ್ತಿಲಲ್ಲಿ ಎಸೆಯಲಾಗಿದೆ ಎಂದು ಅನ್ನಿಸಿತ್ತು: ಉನ್ನತ ಸ್ಥಾನವನ್ನು ತೊರೆದ ಐಎಎಸ್ ಅಧಿಕಾರಿಯ ಪೋಸ್ಟ್

PHOTO: Twitter.com
ಪುಣೆ,ಜು.5: ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಮತ್ತು ಔಷಧಿ ಇಲಾಖೆ (ಎಂಇಡಿಡಿ)ಯಲ್ಲಿ ಜಂಟಿ ನಿರ್ದೇಶಕರಾಗಿದ್ದ 2008ರ ತಂಡದ ಐಎಎಸ್ ಅಧಿಕಾರಿ ದೌಲತ್ ದೇಸಾಯಿ ಅವರು ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿದ್ದು,ಸೋಮವಾರ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ ಸುದೀರ್ಘ ಬರಹದಲ್ಲಿ ‘ಹಿತ್ತಿಲಿನಲ್ಲಿ ಎಸೆಯಲ್ಪಟ್ಟಿದ್ದು ಸಾಕಷ್ಟು ಖಿನ್ನತೆ ಹುಟ್ಟಿಸುವಂತಿತ್ತು ’ಎಂದು ಹೇಳಿದ್ದಾರೆ.
ಎಂಇಡಿಡಿಗೆ ವರ್ಗಾವಣೆಗೊಳ್ಳುವ ಮುನ್ನ ದೇಸಾಯಿ ಕೊಲ್ಲಾಪುರ ಜಿಲ್ಲಾಧಿಕಾರಿಯಾಗಿದ್ದರು ಮತ್ತು 2019ರಲ್ಲಿ ಇಡೀ ಜಿಲ್ಲೆಯಲ್ಲಿ ಹಾವಳಿಯನ್ನುಂಟು ಮಾಡಿದ್ದ ಭೀಕರ ನೆರೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.
‘ಮಿಶ್ರಭಾವನೆಗಳ ನಡುವೆಯೇ,ನಾನು ರಾಜೀನಾಮೆ ನೀಡಿದ್ದೇನೆ ಮತ್ತು ಎಲ್ಲ ಅಧಿಕಾರ,ಭದ್ರತೆ,ಸ್ಥಾನಮಾನ ಮತ್ತು ಪ್ರತಿಷ್ಠೆಯನ್ನು ಹಿಂದಕ್ಕೆ ಬಿಟ್ಟು ಭಾರತೀಯ ಆಡಳಿತ ಸೇವೆ (ಐಎಎಸ್)ಯಿಂದ ಹೊರಬಂದಿದ್ದೇನೆ ಎಂದು ನಿಮಗೆಲ್ಲ ತಿಳಿಸುತ್ತಿದ್ದೇನೆ.
ಉತ್ತಮ ಆರೋಗ್ಯಕ್ಕಾಗಿ ಪ್ರಯತ್ನ ಈ ನಿರ್ಧಾರಕ್ಕೆ ತಕ್ಷಣದ ಪ್ರೇರಣೆಯಾಗಿದ್ದರೂ ಹಿತ್ತಿಲಲ್ಲಿ ಎಸೆಯಲ್ಪಡುವುದು, ಅದೂ ಕೊಲ್ಲಾಪುರದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಯಾಗಿ ಅತ್ಯಂತ ಸವಾಲಿನ ಅಧಿಕಾರಾವಧಿಯನ್ನು ಪೂರೈಸಿದ ಬಳಿಕ,ಸಾಕಷ್ಟು ಖಿನ್ನತೆಯನ್ನುಂಟು ಮಾಡುತ್ತದೆ’ ಎಂದು ತನ್ನ ಪೋಸ್ಟ್ ನಲ್ಲಿ ಹೇಳಿರುವ ದೇಸಾಯಿ, ನಾಗರಿಕ ಸೇವೆಯು ದೇಶದ ಜನತೆಯ ಸೇವೆ ಮಾಡಲು ತನಗೆ ಅವಕಾಶ ಮತ್ತು ಮನ್ನಣೆಯನ್ನು ಒದಗಿಸಿತ್ತು ಎಂದಿದ್ದಾರೆ.
ಸಾರ್ವಜನಿಕ ಹಿತಾಸಕ್ತಿಯು ಪಣಕ್ಕೊಡ್ಡಲ್ಪಟ್ಟಾಗ ತಾನೆಂದೂ ರಾಜಿ ಮಾಡಿಕೊಂಡಿರಲಿಲ್ಲ ಎಂದು ಹೇಳಿರುವ ಅವರು,‘ನಾನು ಯಾವಾಗಲೂ ದುರ್ಬಲರು ಮತ್ತು ಅಗತ್ಯವುಳ್ಳವರ ಧ್ವನಿಗಳನ್ನು ಆಲಿಸಿದ್ದೆ,ಪ್ರಬಲರು ಮತ್ತು ಸ್ಥಾಪಿತರ ಪಟ್ಟಭದ್ರ ಹಿತಾಸಕ್ತಿಗಳನ್ನು ಕಡೆಗಣಿಸಿದ್ದೆ. ನನ್ನ ಕೈಗಳು ನಡುಗಿದ್ದವು,ಆದರೆ ನನ್ನ ನಿರ್ಧಾರಗಳು ನಡುಗಿರಲಿಲ್ಲ.
ಅದಕ್ಕಾಗಿ ಕೆಲವೊಮ್ಮೆ ನೋವುಂಡ ಅತೃಪ್ತರಿಂದ ಟೀಕೆಗಳನ್ನು ಸಂತೋಷದಿಂದಲೇ ಎದುರಿಸಿದ್ದೆ. ಸಮಾಜದ ಒಳಿತಿಗಾಗಿ ನಿಯಮಗಳು ಮತ್ತು ನಿಬಂಧನೆಗಳ ಚೌಕಟ್ಟಿನಲ್ಲಿ ನಾನೇನನ್ನು ಮಾಡಬಹುದಿತ್ತೋ ಅದನ್ನು ಮಾಡಿದ್ದೇನೆ’ ಎಂದಿದ್ದಾರೆ.
ಇದು ಐಎಎಸ್ ನ ಪ್ರಭಾವಲಯದಿಂದ ಹೊರಬರುವ, ಶ್ರೀಸಾಮಾನ್ಯನಾಗುವ ಮತ್ತು ಹೊರಜಗತ್ತಿನಲ್ಲಿ ಹೋರಾಡುವ ಸಮಯವಾಗಿದೆ ಎಂದಿರುವ ದೇಸಾಯಿ,ತನಗೆ ಸಂತೋಷ ಮತ್ತು ತೃಪ್ತಿಯಿದೆ,ಯಾವುದೇ ವಿಷಾದವಿಲ್ಲ ಎಂದು ಬರೆದಿದ್ದಾರೆ.
ದೇಸಾಯಿ ತನ್ನ 14 ವರ್ಷಗಳ ಸೇವಾವಧಿಯಲ್ಲಿ ವಿಪತ್ತು ನಿರ್ವಹಣೆ ನಿರ್ದೇಶಕರಾಗಿ ಮತ್ತು ಪುಣೆ ಜಿಲ್ಲಾ ಪರಿಷದ್ ನ ಸಿಇಒ ಆಗಿಯೂ ಸೇವೆ ಸಲ್ಲಿಸಿದ್ದರು.