ನ್ಯಾ. ಸಂದೇಶ್ ಗೆ ವರ್ಗಾವಣೆ ಬೆದರಿಕೆ ಆರೋಪ; ಸುಪ್ರೀಂಕೋರ್ಟ್ ನ್ಯಾಯಾಮೂರ್ತಿ ನೇತೃತ್ವದ ತನಿಖೆಗೆ ವಕೀಲರ ಸಂಘ ಆಗ್ರಹ

ನ್ಯಾಯಮೂರ್ತಿ ಎಚ್.ಪಿ ಸಂದೇಶ್
ಬೆಂಗಳೂರು, ಜು.5: ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಅವರು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಐತಿಹಾಸಿಕ ತೀರ್ಪನ್ನು ನೀಡಿದ್ದು, ಅವರಿಗೆ ವರ್ಗಾವಣೆ ಬೆದರಿಕೆಯೊಡ್ಡಲಾಗುತ್ತಿದೆ. ಇದನ್ನು ವಕೀಲರ ಸಂಘವು ಖಂಡಿಸಿದ್ದು, ಇದರ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಾಮೂರ್ತಿ ನೇತೃತ್ವದ ತನಿಖೆಗೆ ಆಗ್ರಹಿಸಿದೆ.
ಮಂಗಳವಾರ ಪ್ರೆಸ್ಕ್ಲಬ್ನಲ್ಲಿ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮಾತನಾಡಿ, ರಾಜ್ಯ ಹೈಕೋರ್ಟ್ ಇತಿಹಾಸದಲ್ಲೇ ಇಂತಹ ಘಟನೆ ನಡೆದಿಲ್ಲ. ನ್ಯಾಯವನ್ನು ಎತ್ತಿಹಿಡಿದಿದ್ದಕ್ಕೆ ವರ್ಗಾವಣೆಯ ಬೆದರಿಕೆಯನ್ನು ಹಾಕಲಾಗುತ್ತಿದೆ. ಇದರ ಹಿಂದೆ ಎಂತಹ ಪ್ರಭಾವಿ ಇದ್ದರೂ, ಸೂಕ್ತ ತನಿಖೆ ಆಗಲೇಬೇಕು ಎಂದು ಒತ್ತಾಯಿಸಿದರು.
ನ್ಯಾಯಾಧೀಶರು ಮತ್ತೊಬ್ಬ ನ್ಯಾಯಾಧೀಶರ ಜೊತೆ ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂಬ ನಿಯಮಗಳನ್ನು ಜಾರಿಗೊಳಿಸಬೇಕು. ರಾಜ್ಯದಲ್ಲಿ ಪಾರದರ್ಶಕತೆ ಕೊರತೆಯಿಂದ ನಾವು ರೋಸಿ ಹೋಗಿದ್ದೇವೆ. ನ್ಯಾ. ಸಂದೇಶ್ ಅವರು ನಿರ್ಭೀತ ಆದೇಶವನ್ನು ನೀಡಿದ್ದಾರೆ. ಹಾಗಾಗಿ ಅವರ ಜೊತೆ ನಾವೆಲ್ಲ ಇದ್ದೇವೆ ಎಂದು ತಿಳಿಸಿದರು.
ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರನ್ನು ಸೋಮವಾರ ಬಂಧಿಸಲಾಗಿದೆ. ಹಾಗಾಗಿ ಜಿಲ್ಲಾಧಿಕಾರಿಯಾಗಿ ಅವರು ಮಾಡಿರುವ ಬಹುತೇಕ ಆದೇಶಗಳಲ್ಲಿ ಭ್ರಷ್ಟಾಚಾರ ನಡೆದಿರುತ್ತದೆ. ಈ ಹಿನ್ನೆಲೆಯಲ್ಲಿ ಅವರು ನೀಡಿರುವ ಆದೇಶಗಳನ್ನು ರದ್ದುಗೊಳಿಸಬೇಕು.
-ವಿವೇಕ್ ಸುಬ್ಬಾರೆಡ್ಡಿ, ವಕೀಲರ ಸಂಘದ ಅಧ್ಯಕ್ಷ







