ಮೈಸೂರು: 'ನಿಮ್ಮ ಕೈಯಲ್ಲಿ ಅಭಿವೃದ್ಧಿ ಆಗುತ್ತಿಲ್ಲ' ಎಂದು ಬಿಜೆಪಿ ಶಾಸಕರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ಮೈಸೂರು,ಜು.5: ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್ ಗ್ರಾಮವೊಂದಕ್ಕೆ ತೆರಳಿದ ವೇಳೆ ಗ್ರಾಮಸ್ಥರು ರಸ್ತೆಯಲ್ಲೇ ತಡೆದು ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸುವಂತೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ನಂಜನಗೂಡು ತಾಲೂಕು ಹುಲ್ಲಹಳ್ಳಿ ಹೋಬಳಿಯ ಮಲ್ಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ವೆಳೆ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮತ ಕೇಳಲು ಮಾತ್ರ ಬರುತ್ತೀರಿ ಅಭಿವೃದ್ಧಿ ಮಾಡಲು ನಿಮ್ಮ ಕೈಯಲ್ಲಿ ಆಗುವುದಿಲ್ಲ, ಇಲ್ಲಿ ಶಾಲಾ ಮಕ್ಕಳು ಓಡಾಡಲು ತುಂಬಾ ಅನಾನುಕೂಲವಾಗಿದೆ. ಮಳೆ ಬಂದರೆ ರಸ್ತೆಯಲ್ಲಿ ಓಡಾಡಲು ಸಾಧ್ಯವಿಲ್ಲ, ಕುಡಿವ ನೀರು, ಚರಂಡಿ ಇಲ್ಲದೆ ನಾವು ಸಂಕಷ್ಟ ಅನುಭವಿಸುತ್ತಿದ್ದೇವೆ. ನಿಮ್ಮ ಕಾರ್ಯಕ್ರಮಗಳು ಇದ್ದರೆ ಮಾತ್ರ ಇಲ್ಲಿಗೆ ಬರುತ್ತೀರ ಎಂದು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಹುಲ್ಲಹಳ್ಳಿ ನಂಜನಗೂಡು ಭಾಗಕ್ಕೆ ರಸ್ತೆ ಇಲ್ಲ, ದುರಸ್ತಿ ಮಾಡುತ್ತೀವಿ ಅಂತೀರಾ, ಆ ಮೇಲೆ ಇತ್ತ ತಿರುಗಿಯೂ ನೋಡಲ್ಲ ಎಂದು ಪ್ರಶ್ನಿಸಿದರು. ಗ್ರಾಮಸ್ಥರ ಪ್ರಶ್ನೆಗಳಿಗೆ ತಬ್ಬಿಬ್ಬಾದ ಶಾಸಕ ಹರ್ಷವರ್ಧನ್ ರಸ್ತೆಯನ್ನು ಸರಿ ಮಾಡಿಸಿದ ಬಳಿಕ ಮತ ಕೇಳಲು ಬರುತ್ತೀನಿ ಎಂದು ವಾಪಸ್ ತೆರಳಿದ್ದಾರೆ.





