ಆಗಸ್ಟ್ 3ಕ್ಕೆ ದಾವಣಗೆರೆಯಲ್ಲಿ ‘ಸಿದ್ದರಾಮಯ್ಯ ಅಮೃತ ಮಹೋತ್ಸವ' ಸಮಾರಂಭ

ಬೆಂಗಳೂರು, ಜು. 5: ‘ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಆಗಸ್ಟ್ ತಿಂಗಳಲ್ಲಿ ಎಪ್ಪತ್ತೈದು ವರ್ಷ ಪೂರ್ಣಗೊಳ್ಳಲಿದ್ದು, ಆ ಹಿನ್ನೆಲೆಯಲ್ಲಿ ಆಗಸ್ಟ್ 3ಕ್ಕೆ ದಾವಣಗೆರೆಯಲ್ಲಿ ಅವರ ಅಭಿಮಾನಿಗಳು, ಹಿತೈಷಿಗಳೆಲ್ಲರೂ ಸೇರಿ ‘ಸಿದ್ದರಾಮಯ್ಯ-75 ಅಮೃತ ಮಹೋತ್ಸವ' ಸಮಾರಂಭವನ್ನು ಏರ್ಪಡಿಸಲು ನಿರ್ಧರಿಸಿದ್ದೇವೆ' ಎಂದು ಸಿದ್ದರಾಮಯ್ಯ-75 ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ಮಾಜಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಸಮಿತಿಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷಾತೀತವಾಗಿ ಅವರ ಹಿತೈಷಿಗಳು, ಅಭಿಮಾನಿಗಳು ಸೇರಿ ಐದಾರು ಲಕ್ಷ ಮಂದಿಯನ್ನು ಸೇರಿಸಿ ಬೃಹತ್ ಸಮಾವೇಶ ನಡೆಸುವ ಮೂಲಕ ಸಿದ್ದರಾಮಯ್ಯ ಅವರಿಗೆ ಗೌರವ ಸಲ್ಲಿಸಲು ಉದ್ದೇಶಿಸಿದ್ದೇವೆ' ಎಂದು ಹೇಳಿದರು.
‘ಹಿಂದುಳಿದ ಬಡ ರೈತ ಕುಟುಂಬದಲ್ಲಿ ಹುಟ್ಟಿದ ಸಿದ್ದರಾಮಯ್ಯ ಕಷ್ಟಪಟ್ಟು ಮೇಲೆ ಬಂದಿದ್ದು, ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಾಜಕಾರಣದಲ್ಲಿದ್ದಾರೆ. ಪ್ರಾಮಾಣಿಕರಾಗಿ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಅಪರೂಪದ ರಾಜಕಾರಣಿ ಅವರು. ಸೋಲು-ಗೆಲುವು ಏರುಪೇರು ಕಂಡಿರುವ ಅವರು, ತನ್ನ ಹೋರಾಟವನ್ನು ಅವರು ಎಂದೂ ಬಿಟ್ಟಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆ ಉಳಿಸಿಕೊಳ್ಳುವುದು ಕಷ್ಟ.
ಹೀಗಿದ್ದರೂ ಶಾಸಕ, ಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಆಗಿ ಅವರು ಜಾರಿಗೆ ತಂದ ಅನ್ನಭಾಗ್ಯ, ವಿದ್ಯಾಸಿರಿ, ಕೃಷಿ ಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ತಮ್ಮ ಕಷ್ಟಗಳನ್ನು ಅನುಭವದ ಹಿನ್ನೆಲೆಯಲ್ಲೇ ರೂಪಿಸಿ ಅನುಷ್ಟಾನಗೊಳಿಸಿದ್ದಾರೆ.ನಾಡಿನ ಜನಪ್ರಿಯ ಹಾಗೂ ಸ್ಪಷ್ಟತೆಯುಳ್ಳ ನಾಯಕ. ರಾಜ್ಯಕ್ಕೆ ಅವರು ನೀಡಿದ ಆಡಳಿತವನ್ನು ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಕೊಟ್ಟ ಭರವಸೆ ಈಡೇರಿಸಿದ ಏಕೈಕ ನಾಯಕ ಎಂದು ಬಣ್ಣಿಸಿದರು.
ದಾವಣಗೆರೆಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಉದ್ಘಾಟಿಸಲಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್, ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯ್ಲಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ದೇಶಪಾಂಡೆ ತಿಳಿಸಿದರು.
ಹೊಸ ಪೀಳಿಗೆಗೆ ಪರಿಚಯಿಸುವ ಕೆಲಸ: ‘ಸಿದ್ದರಾಮಯ್ಯನವರ ಪ್ರಾಮಾಣಿಕತೆ, ಬದ್ಧತೆಯನ್ನು ಯುವ ಪೀಳಿಗೆಗೆ ತಿಳಿಸುವ ಉದ್ದೇಶದಿಂದ, ಅವರನ್ನು ಗೌರವಿಸಲು ‘ಸಿದ್ದರಾಮಯ್ಯ ಅಮೃತ ಮಹೋತ್ಸವ' ಸಮಾರಂಭ ಏರ್ಪಡಿಸಿದ್ದು, ಇದೊಂದು ಪಕ್ಷಾತೀತವಾದ ಕಾರ್ಯಕ್ರಮ' ಎಂದು ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿದ್ದ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಮಾತನಾಡಿ, ‘ರಾಷ್ಟ್ರದಲ್ಲಿ ಅತ್ಯಂತ ವಿಶಿಷ್ಟ ವ್ಯಕ್ತಿತ್ವದ ನಾಯಕ ಸಿದ್ದರಾಮಯ್ಯ ಅವರು, ಹಲವು ಏಳು ಬೀಳುಗಳನ್ನು ಕಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅನುಭವಿ ನಾಯಕರ ಕೊರತೆಯಿದೆ. ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ ದೃಷ್ಟಿಯಿಂದ ಅವರನ್ನು ಸನ್ಮಾನಿಸಲು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ' ಎಂದು ನುಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ಬಸವರಾಜ ರಾಯರೆಡ್ಡಿ, ಎಸ್.ಎಸ್.ಮಲ್ಲಿಕಾರ್ಜುನ್, ಡಾ. ಎಚ್.ಆಂಜನೇಯ, ಬಿ.ಎಲ್.ಶಂಕರ್, ಪರಿಷತ್ ಸದಸ್ಯ ನಸೀರ್ ಅಹ್ಮದ್, ಕೆ.ಗೋವಿಂದರಾಜು, ಜಯಮಾಲಾ, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ಶಾಸಕ ಬೈರತಿ ಸುರೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
‘ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಕುಸಿತದ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಾರಂಭದ ಮೂಲಕ ಮೌಲ್ಯಗಳು ಮತ್ತು ಬಹುತ್ವ ರಕ್ಷಣೆಗಾಗಿ ಕಾರ್ಯಕ್ರಮ ಆಯೋಜಿಸಿದ್ದು, ಇದು ಯಾವುದೇ ವ್ಯಕ್ತಿ ಪ್ರತಿಷ್ಠೆಯ ಕಾರ್ಯಕ್ರಮವಲ್ಲ. ಈ ನಾಡು ಕಂಡ ಸಮರ್ಥ ಆಡಳಿತಗಾರ ಸಿದ್ದರಾಮಯ್ಯರ ಹುಟ್ಟುಹಬ್ಬವನ್ನು ಪಕ್ಷದ ವೇದಿಕೆಯಿಂದಾಚೆಗೆ, ಅವರ ಅಭಿಮಾನಿಗಳು, ಸ್ನೇಹಿತರು ಮತ್ತು ಹಿತೈಷಿಗಳೆಲ್ಲರೂ ಸೇರಿ ನಡೆಸುತ್ತಿದ್ದೇವೆ. ಹೀಗಾಗಿ ಯಾವುದೇ ಗೊಂದಲಕ್ಕೆ ಅವಕಾಶವೇ ಇಲ್ಲ'
-ಡಾ.ಎಚ್.ಸಿ.ಮಹದೇವಪ್ಪ ಸ್ವಾಗತಿ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ-75 ಅಮೃತ ಮಹೋತ್ಸವ









