ಸಿಕ್ಕಿಂನಲ್ಲಿ ನೈರೋಬಿ ನೊಣದ ಹಾವಳಿ; ನೂರಾರು ವಿದ್ಯಾರ್ಥಿಗಳಲ್ಲಿ ಚರ್ಮದ ಸೋಂಕಿಗೆ ಕಾರಣವಾದ ʼಆಸಿಡ್ ಕೀಟʼ

Photo: en.wikipedia.org/wiki/Nairobi_fly
ಹೊಸದಿಲ್ಲಿ: ಸಿಕ್ಕಿಂ ರಾಜ್ಯದಲ್ಲಿ ನೈರೋಬಿ ನೊಣ ಅಥವಾ ಆಸಿಡ್ ಫ್ಲೈ ಹಾವಳಿ ಎದ್ದಿದೆ. ಪೂರ್ವ ಸಿಕ್ಕಿಂನ ಇಂಜಿನಿಯರಿಂಗ್ ಕಾಲೇಜಿನ ಸುಮಾರು 100 ವಿದ್ಯಾರ್ಥಿಗಳಲ್ಲಿ ನೈರೋಬಿ ನೊಣಗಳಿಂದಾಗಿ ಚರ್ಮದ ಸೋಂಕು ಕಂಡು ಬಂದಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಸೋಂಕಿತ ವಿದ್ಯಾರ್ಥಿಗಳಿಗೆ ಔಷಧೋಪಚಾರ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕಾಲೇಜು ಆಡಳಿತ ತಿಳಿಸಿದೆ. ಇತ್ತೀಚೆಗೆ ಸೋಂಕಿಗೆ ಒಳಗಾದ ವಿದ್ಯಾರ್ಥಿಯೊಬ್ಬನ ಕೈಗೆ ಶಸ್ತ್ರಚಿಕಿತ್ಸೆಯ ಅಗತ್ಯವೂ ಎದುರಾಯಿತು ಎಂದು ವರದಿಗಳು ಹೇಳಿವೆ.
ಪೂರ್ವ ಆಫ್ರಿಕಾ ಮೂಲದ ನೈರೋಬಿ ನೊಣಗಳು ಮಜಿತಾರ್ನಲ್ಲಿರುವ ಸಿಕ್ಕಿಂ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (SMIT) ಕ್ಯಾಂಪಸ್ನಲ್ಲಿ ವೇಗವಾಗಿ ಬೆಳೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೊಣಗಳು ಸಂತಾನೋತ್ಪತ್ತಿ ಮತ್ತು ಆಹಾರ ಪೂರೈಕೆಯ ಹುಡುಕಾಟದಲ್ಲಿ ಹೊಸ ಪ್ರದೇಶಗಳನ್ನು ಹುಡುಕಿ ಬರುತ್ತವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ನೈರೋಬಿ ನೊಣಗಳನ್ನು ಕೀನ್ಯಾದ ನೊಣಗಳು, ಆಸಿಡ್ ಫ್ಲೈ ಅಥವಾ ಡ್ರ್ಯಾಗನ್ ಬಗ್ಸ್ ಎಂದೂ ಕರೆಯುತ್ತಾರೆ, ಇದು ಸಣ್ಣ, ಜೀರುಂಡೆ-ತರಹದ ಕೀಟಗಳಾಗಿದ್ದು, ಪೆಡೆರಸ್ ಎಕ್ಸಿಮಿಯಸ್ ಮತ್ತು ಪೇಡೆರಸ್ ಸಬೇಯಸ್ ಎಂಬ ಎರಡು ಪ್ರಬೇಧಗಳಿಗೆ ಸೇರಿದೆ. ಅವು ಕಿತ್ತಳೆ ಮತ್ತು ಕಪ್ಪು ಬಣ್ಣದಲ್ಲಿರುತ್ತವೆ. ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುತ್ತವೆ. ಹೆಚ್ಚಿನ ಕೀಟಗಳಂತೆ, ಜೀರುಂಡೆಗಳು ಪ್ರಕಾಶಮಾನವಾದ ಬೆಳಕಿನಿಂದ ಆಕರ್ಷಿತವಾಗುತ್ತವೆ.