ಮರ್ಸಿಡಿಸ್ ಅನ್ನು ಹಿಂದಿಕ್ಕಿದ ಆಟೋ ರಿಕ್ಷಾ: ಉದ್ಧವ್ ಠಾಕ್ರೆಗೆ ಏಕನಾಥ್ ಶಿಂಧೆ ತರಾಟೆ

Photo:PTI
ಮುಂಬೈ: ಈ ಹಿಂದೆ ಜೀವನೋಪಾಯಕ್ಕಾಗಿ ಆಟೋ ರಿಕ್ಷಾ ಓಡಿಸುತ್ತಿದ್ದ ದಿನವನ್ನು ಸ್ಪಷ್ಟವಾಗಿ ಉಲ್ಲೇಖಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಂಗಳವಾರ ಶಿವಸೇನ ಅಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಮರ್ಸಿಡಿಸ್ ಕಾರನ್ನು ಆಟೋರಿಕ್ಷಾ ಹಿಂದಿಕ್ಕಿದೆ ಎಂದು ಹೇಳಿದ್ದಾರೆ.
"ಆಟೋರಿಕ್ಷಾವು ಮರ್ಸಿಡಿಸ್ (ಕಾರು) ಅನ್ನು ಹಿಂದಿಕ್ಕಿದೆ... ಏಕೆಂದರೆ ಇದು ಸಾಮಾನ್ಯ ಜನರ ಸರಕಾರವಾಗಿದೆ" ಎಂದು ಶಿಂಧೆ ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಕನಿಷ್ಠ ಶಿವಸೇನೆ 40 ಶಾಸಕರೊಂದಿಗೆ ಬಂಡಾಯವೆದ್ದು ಕಳೆದ ವಾರ ಠಾಕ್ರೆ ನೇತೃತ್ವದ ಎಂವಿಎ ಸರಕಾರದ ಪತನಕ್ಕೆ ಕಾರಣವಾಗಿರುವ ಶಿಂಧೆ ಅವರು ಬಂಡಾಯದ ನೇತೃತ್ವವನ್ನು ವಹಿಸಿದ್ದಾಗ ಕೆಲವು ಶಿವಸೇನ ನಾಯಕರು ಅವರನ್ನು "ಆಟೋ ರಿಕ್ಷಾ ಚಾಲಕ" ಎಂದು ನಿಂದಿಸಿದ್ದರು.
ಶಿಂಧೆ ತನ್ನ ಆರಂಭಿಕ ದಿನಗಳಲ್ಲಿ ಜೀವನೋಪಾಯಕ್ಕಾಗಿ ಆಟೋ ರಿಕ್ಷಾವನ್ನು ಓಡಿಸಿದ್ದರು.
ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಲು ಠಾಕ್ರೆ ಅವರು ಮರ್ಸಿಡಿಸ್ ಕಾರನ್ನು ಚಲಾಯಿಸಿಕೊಂಡು ರಾಜಭವನ ತಲುಪಿದ್ದರು.
ಉದ್ಧವ್ ಠಾಕ್ರೆ ಅವರು ವಿಶ್ವಾಸಮತ ಪರೀಕ್ಷೆಗೆ ಒಳಗಾಗದೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ ಜೂನ್ 30 ರಂದು ಏಕನಾಥ್ ಶಿಂಧೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.





